ಪತ್ತನಂತಿಟ್ಟ: ಕೇರಳದ ಶಬರಿಮಲೆಯಿಂದ ವಾಪಸ್ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದ ವಾಹನ ಪಲ್ಟಿಯಾಗಿ 8 ಯಾತ್ರಾರ್ಥಿಗಳು ಮೃತಪಟ್ಟ ದುರ್ಘಟನೆ ಕೇರಳ-ತಮಿಳುನಾಡು ಗಡಿಯಲ್ಲಿರುವ ಕುಮಿಲಿಯಲ್ಲಿ ನಡೆದಿದೆ. ಮಗು ಸೇರಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇವರೆಲ್ಲ ತಮಿಳುನಾಡಿನ ತೇಣಿ-ಆಂಡಿಪೆಟ್ಟಿ ನಿವಾಸಿಗಳಾಗಿದ್ದು, ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟು, ಶುಕ್ರವಾರ ರಾತ್ರಿ ಅಲ್ಲಿಂದ ವಾಪಸ್ ತಮ್ಮೂರಿಗೆ ಮರಳುತ್ತಿದ್ದರು. ಆದರೆ ರಾತ್ರಿ 11ಗಂಟೆ ಹೊತ್ತಿಗೆ ಆ ವಾಹನ ಅಪಘಾತಕ್ಕೀಡಾಗಿದೆ. ಈ ವಾಹನ ಸಿಕ್ಕಾಪಟೆ ವೇಗವಾಗಿ ಹೋಗುತ್ತಿತ್ತು. ಕುಮಿಲಿ ಬಳಿ ಗುಡ್ಡ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ರಸ್ತೆ ಪಕ್ಕದ 40 ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿದೆ.
ಕೇಂದ್ರ ವಿದೇಶಾಂಗ ಇಲಾಖೆ ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯದ ಸಹಾಯಕ ಸಚಿವ ವಿ. ಮರಳೀಧರನ್ ಅವರು ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಇದೀಗ ಸಂಕ್ರಾಂತಿ ಹಬ್ಬ ಸಮೀಪಿಸುತ್ತಿರುವ ಕಾರಣ ಶಬರಿಮಲೆ ದೇವಸ್ಥಾನಕ್ಕೆ ಹೋಗುವ ಯಾತ್ರಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಸಮಯದಲ್ಲಿ ದೇಗುಲದಲ್ಲಿ ಒಂದು ದಿನಕ್ಕೆ ಲಕ್ಷ ಭಕ್ತರು ದರ್ಶನ ಪಡೆಯುತ್ತಿದ್ದಾರೆ.
ಇದನ್ನೂ ಓದಿ: Road Accident | ಶಬರಿಮಲೆಗೆ ತೆರಳಿದ್ದವರ ಮಿನಿ ಬಸ್‌ಗೆ ಲಾರಿ ಡಿಕ್ಕಿ; ಅಪಘಾತದಲ್ಲಿ 23 ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ