Site icon Vistara News

Road Accident : ರಸ್ತೆಯಲ್ಲೇ ಹೊತ್ತಿ ಉರಿದ 2 ಕೋಟಿ ರೂ. ಮೌಲ್ಯದ ಪೋರ್ಷೆ ಕಾರು!

#image_title

ಗುರುಗ್ರಾಮ: ರಸ್ತೆ ಅಪಘಾತಗಳ (Road Accident) ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಗುರುಗ್ರಾಮದಲ್ಲಿ ಗುರುವಾರ ಪೋರ್ಷೆ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿದೆ. ಭಸ್ಮವಾದ ಐಷಾರಾಮಿ ಕಾರಿನ ಬೆಲೆ 2 ಕೋಟಿ ರೂ.ಗೂ ಹೆಚ್ಚಾಗಿದೆ.

ಗುರುವಾರ ಮುಂಜಾನೆ 4 ಗಂಟೆಯ ಹೊತ್ತಿಗೆ ಗುರುಗ್ರಾಮದ ಗಾಲ್ಫ್‌ ಕೋರ್ಸ್‌ ರಸ್ತೆ ಬಳಿ ಈ ಘಟನೆ ನಡೆದಿದೆ. ಕಾರನ್ನು ಮಂಕಿರತ್‌ ಸಿಂಗ್‌ (35) ಹೆಸರಿನ ಚಾಲಕ ಓಡಿಸುತ್ತಿದ್ದ. ಆತ ಬರ್ತ್‌ ಡೇ ಪಾರ್ಟಿಯೊಂದನ್ನು ಮುಗಿಸಿಕೊಂಡು ಸಿಕಂದರ್‌ಪುರ್‌ನಲ್ಲಿರುವ ಮನೆಗೆ ವಾಪಸು ತೆರಳುತ್ತಿದ್ದ. ಆ ವೇಳೆ ಆತನಿಗೆ ರಸ್ತೆಯಲ್ಲಿ ನಾಯಿಯೊಂದು ಅಡ್ಡ ಬಂದಿದೆ. ಅದನ್ನು ತಪ್ಪಿಸಲು ಹೋದಾಗ ಕಾರು ನಿಯಂತ್ರಣ ತಪ್ಪಿದ್ದು, ಮರಕ್ಕೆ ಡಿಕ್ಕಿ ಹೊಡೆದು, ಸರ್ವೀಸ್‌ ರಸ್ತೆಯಲ್ಲಿ ಬಿದ್ದಿದೆ. ಅಲ್ಲಿಯೇ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಸಂಪೂರ್ಣವಾಗಿ ಉರಿದು ಭಸ್ಮವಾಗಿದೆ.

ಇದನ್ನೂ ಓದಿ: Road Accident: ಟ್ರ್ಯಾಕ್ಟರ್- ಬೈಕ್‌ ನಡುವೆ ಭೀಕರ ಅಪಘಾತ; ಉಸಿರು ಚೆಲ್ಲಿದ ಸವಾರ, ಮತ್ತೊಬ್ಬನ ಸ್ಥಿತಿ ಗಂಭೀರ
ಚಾಲಕನ ಕಾಲು ಮತ್ತು ಕೈಗಳಿಗೆ ಗಂಭೀರ ಪ್ರಮಾಣದಲ್ಲಿ ಸುಟ್ಟ ಗಾಯಗಳಾಗಿವೆ. ಆತ ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಿದೆ.

ಭಸ್ಮವಾದ ಕಾರು ಕೆಂಪು ಬಣ್ಣದ ಪೋರ್ಷೆ ಜರ್ಮನಿ 911 ಸ್ಪೋರ್ಟ್‌ ಕಾರಾಗಿತ್ತು. ಚಂಡೀಗಢದಲ್ಲಿ ನೋಂದಣಿಯಾಗಿರುವ ಕಾರಿನ ಸಂಖ್ಯೆ ಅದರ ಮಾಡೆಲ್‌ಗೆ ಸರಿಹೊಂದುವಂತೆ 911 ಆಗಿತ್ತು. ಈ ಕಾರಿನ ಅಂದಾಜು ಬೆಲೆ 2.2 ಕೋಟಿ ರೂ. ಎಂದು ತಿಳಿಸಲಾಗಿದೆ.

Exit mobile version