Site icon Vistara News

Road Rage Case: ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ

Navajot Singh

ಸುಮಾರು 34 ವರ್ಷಗಳ ಹಿಂದಿನ ರಸ್ತೆ ಜಗಳ (Road Rage Case) ಪ್ರಕರಣವೊಂದರಲ್ಲಿ ಕಾಂಗ್ರೆಸ್‌ ನಾಯಕ, ಮಾಜಿ ಕ್ರಿಕೆಟರ್‌ ನವಜೋತ್‌ ಸಿಂಗ್‌ ಸಿಧು (Navjot Singh Sidhu)ಗೆ 1 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ತಾವು ಸುಪ್ರೀಂಕೋರ್ಟ್‌ ಆದೇಶಕ್ಕೆ ತಲೆಬಾಗಿ, ಕಾನೂನು ಪರಿಪಾಲನೆ ಮಾಡುವುದಾಗಿ ಸಿಧು ಟ್ವೀಟ್‌ ಮಾಡಿ ತಿಳಿಸಿದ್ದಾರೆ. ಪಂಜಾಬ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾಗಿದ್ದ ನವಜೋತ್‌ ಸಿಂಗ್‌ ಸಿಧು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಕಾಂಗ್ರೆಸ್‌ ಸೋತ ಬಳಿಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪಂಜಾಬ್‌ನಲ್ಲಿ ಈ ಬಾರಿ ಕಾಂಗ್ರೆಸ್‌ನ್ನು ನೆಲಕಚ್ಚಿಸಿದ ನಾಯಕ ಎಂಬ ಕುಖ್ಯಾತಿಗೂ ಪಾತ್ರರಾಗಿದ್ದಾರೆ.

1988ರ ಡಿಸೆಂಬರ್‌ 27ರಂದು ನವಜೋತ್‌ ಸಿಂಗ್‌ ಸಿಧು ಮತ್ತು ಅವರ ಸಹಾಯಕ ರೂಪಿಂದರ್‌ ಸಿಂಗ್‌ ಸಂಧು ಸೇರಿ ಪಾರ್ಕಿಂಗ್‌ ಸ್ಥಳವೊಂದರಲ್ಲಿ ಪಟಿಯಾಲಾದ ನಿವಾಸಿ ಗುರ್ನಾಮ್‌ ಸಿಂಗ್‌ ಎಂಬುವರೊಂದಿಗೆ ಜಗಳವಾಡಿದ್ದರು. ಈ ಜಗಳದಲ್ಲಿ ಸಿಧು ಮತ್ತು ಸಂಧು ಸೇರಿ ಗುರ್ನಾಮ್‌ ಸಿಂಗ್‌ರನ್ನು ಅವರ ಕಾರಿನಿಂದ ಕೆಳಗೆ ಎಳೆದು, ತಲೆಗೆ ಹೊಡೆದಿದ್ದರು. ಗುರ್ನಾಮ್‌ ಸಿಂಗ್‌ ಆ ಕ್ಷಣದಲ್ಲಿ ಮೃತಪಡದೆ ಇದ್ದರೂ, ಸ್ವಲ್ಪ ದಿನಗಳ ಬಳಿಕ ಸಾವನ್ನಪ್ಪಿದ್ದರು.

ಮೃತ ಗುರ್ನಾಮ್‌ ಸಿಂಗ್‌ ಕುಟುಂಬದವರು ಮೊದಲು ಪಟಿಯಾಲಾ ಸೆಷನ್ಸ್‌ ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಸೂಕ್ತವಾದ ದಾಖಲೆಗಳು ಇಲ್ಲದ ಕಾರಣದಿಂದ 1999ರಲ್ಲಿ ನವಜೋತ್‌ ಸಿಂಗ್‌ ಸಿಧು ಹಾಗೂ ಅವರ ಸಹಚರ ಸಂಧು ಅವರನ್ನು ಸೆಷನ್ಸ್‌ ನ್ಯಾಯಾಲಯ ದೋಷಮುಕ್ತಗೊಳಿಸಿತ್ತು. ಮತ್ತೆ ಕುಟುಂಬದವರು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಉಚ್ಛ ನ್ಯಾಯಾಲಯ, ಇದು ಶಿಕ್ಷಾರ್ಹ ನರಹತ್ಯೆ ಎಂದು ಹೇಳಿ, ಸಿಧುಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಇದನ್ನೂ ಓದಿ | ಕಾಂಗ್ರೆಸ್‌ಗೆ ಹಾರ್ದಿಕ್‌ ಪಟೇಲ್‌ ಗುಡ್‌ಬೈ, ಮುಂದಿನ ನಿಲ್ದಾಣ ಬಿಜೆಪಿ?

ಹೈಕೋರ್ಟ್‌ ತೀರ್ಪಿನ ವಿರುದ್ಧ ನವಜೋತ್‌ ಸಿಂಗ್‌ ಸಿಧು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣವನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿದ ಕೋರ್ಟ್‌‌ 2018ರಲ್ಲಿ, ಗುರ್ನಾಮ್‌ ಸಿಂಗ್‌ ಅವರು ನವಜೋತ್‌ ಸಿಂಗ್‌ ಸಿಧು ಅವರು ಹೊಡೆದ ಒಂದೇ ಏಟಿಗೆ ಮೃತಪಟ್ಟಿದ್ದಾರೆ ಎಂದು ಹೇಳಲು ಸೂಕ್ತ ದಾಖಲೆ ಇಲ್ಲ. ಆದರೂ ಗುರ್ನಾಮ್‌ಗೆ 65 ವರ್ಷ ಆಗಿತ್ತು. ಹಿರಿಯ ನಾಗರಿಕರ ಮೇಲೆ ಕೈ ಮಾಡುವುದು ಅಪರಾಧ ಎಂದು ಹೇಳಿ, ಸಿಧುಗೆ 1000 ರೂಪಾಯಿ ದಂಡ ವಿಧಿಸಿತ್ತು. ಆದರೆ ಜೈಲು ಶಿಕ್ಷೆಯನ್ನು ರದ್ದು ಮಾಡಿತ್ತು. ನವಜೋತ್‌ ಸಿಂಗ್‌ ಸಿಧು ಸಹಚರ ರೂಪಿಂದರ್‌ ಸಿಂಗ್‌ ಸಂಧುರನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸಿತ್ತು.

ಸುಪ್ರೀಂಕೋರ್ಟ್‌ನ ಈ ಆದೇಶದ ಬಗ್ಗೆ ಗುರ್ಮಾನ್‌ ಸಿಂಗ್‌ ಕುಟುಂಬ ಅತೃಪ್ತಿ ವ್ಯಕ್ತಪಡಿಸಿತ್ತು. ಈ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಮನವಿ ಮಾಡಿ ಮತ್ತೆ ಸುಪ್ರೀಂಕೋರ್ಟ್‌ಗೆ ಕುಟುಂಬದ ಸದಸ್ಯರೊಬ್ಬರು ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್‌ ಮತ್ತು ಎಸ್‌.ಕೆ.ಕೌಲ್‌ ನೇತೃತ್ವದ ಪೀಠ ವಿಚಾರಣೆ ನಡೆಸಿತ್ತು. ಸಿಧು ಅವರಿಗೆ ನರಹತ್ಯೆ ಪ್ರಕರಣದಡಿ ಶಿಕ್ಷೆ ವಿಧಿಸಬೇಕು ಎಂದು ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಇದನ್ನೂ ಓದಿ | ಕಾಂಗ್ರೆಸ್‌ ನಲ್ಲಿ ಯುವಕರು V/s ಹಿರಿಯರು, 50% ಯುವ ಮೀಸಲಿಗೆ ಸೀನಿಯರ್ಸ್‌ ಗರಂ

Exit mobile version