Site icon Vistara News

ಪಂಜಾಬ್​​ ಪೊಲೀಸ್ ಠಾಣೆ ಮೇಲೆ ರಾಕೆಟ್​ ಚಾಲಿತ ಗ್ರೆನೇಡ್​ ದಾಳಿ; ಬಾಗಿಲಿನ ಗಾಜು ಪುಡಿಪುಡಿ, ಪಾಕ್​ ಕೈವಾಡ ಶಂಕೆ

Rocket propelled grenade Attacks on Punjab police station

ಮೊಹಾಲಿ: ಪಂಜಾಬ್​​ನ ತರಣ್​ ತಾರಣ್​ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ಶುಕ್ರವಾರ ತಡರಾತ್ರಿ 1 ಗಂಟೆ ಹೊತ್ತಿಗೆ ರಾಕೆಟ್​ ಚಾಲಿತ ಗ್ರೆನೇಡ್​ ದಾಳಿಯಾಗಿದೆ. ತರಣ್​ ತಾರಣ್​ ಜಿಲ್ಲೆಯ ಗಡಿ ಭಾಗದ ಅಮೃತ್​ಸರ್​-ಭಟಿಂಡಾ ಹೆದ್ದಾರಿಯಲ್ಲಿರುವ ಸರಹಲಿ ಪೊಲೀಸ್ ಠಾಣೆ ಮೇಲೆ ಗ್ರೇನೇಡ್​ ದಾಳಿ ಮಾಡಲಾಗಿದ್ದು, ಈ ಕೃತ್ಯ ಎಸಗಿದವರು ಯಾರೆಂದು ಗೊತ್ತಾಗಿಲ್ಲ. ಠಾಣೆಯ ಹೊರಭಾಗದಲ್ಲಿರುವ ಕಂಬವೊಂದಕ್ಕೆ ರಾಕೆಟ್​ ಬಂದು ಬಡಿದು, ಮರಳಿ ಪುಟಿದಿದ್ದರಿಂದ ಹೆಚ್ಚೇನೂ ತೊಂದರೆಯಾಗಲಿಲ್ಲ. ಪೊಲೀಸ್​ ಠಾಣೆಯ ಬಾಗಿಲಿನ ಗಾಜು ಒಡೆದು ಹೋಗಿದ್ದು ಬಿಟ್ಟರೆ, ಕಟ್ಟಡವೂ ಜಾಸ್ತಿ ಹಾನಿಯಾಗಿಲ್ಲ. ಆದರೆ ಪೊಲೀಸ್ ಠಾಣೆ ಬಳಿಯೇ ಇದ್ದ ಒಂದು ಸೇವಾಕೇಂದ್ರದ ಕಿಟಕಿಯೂ ಒಡೆದಿದೆ ಎಂದು ವರದಿಯಾಗಿದೆ.

ಇನ್ನು ಗ್ರೆನೇಡ್​ ದಾಳಿಯ ಮಾಹಿತಿ ಬರುತ್ತಿದ್ದಂತೆ ಹಿರಿಯ ಪೊಲೀಸ್​ ಅಧಿಕಾರಿಗಳು, ಡಿಜಿಪಿ ಗೌರವ್ ಯಾದವ್​ ಮತ್ತು ವಿಧಿವಿಜ್ಞಾನ ತಂಡದ ಸಿಬ್ಬಂದಿ ಠಾಣೆಗೆ ಆಗಮಿಸಿದ್ದಾರೆ. ತನಿಖೆ ಪ್ರಾರಂಭವಾಗಿದೆ. ಈ ದಾಳಿಯ ಹಿಂದೆ ಪಾಕಿಸ್ತಾನಿ ಗುಪ್ತಚರ ಇಲಾಖೆ ಐಎಸ್​ಐ ಆಶ್ರಯದಲ್ಲಿರುವ ಖಲಿಸ್ತಾನಿಗಳ ಕೈವಾಡವಿದೆ. ಖಲಿಸ್ತಾನಿ ಬೆಂಬಲಿತ ಭಯೋತ್ಪಾದಕರೇ ಈ ದಾಳಿ ನಡೆಸಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ.

ಇದೇ ವರ್ಷ ಮೇ ತಿಂಗಳಲ್ಲಿ ಪಂಜಾಬ್​​ನ ಮೊಹಾಲಿಯಲ್ಲಿರುವ ಗುಪ್ತಚರ ಇಲಾಖೆ ಪ್ರಧಾನ ಕಚೇರಿ ಮೇಲೆ ಹೀಗೆ ರಾಕೆಟ್​ ಚಾಲಿತ ಗ್ರೆನೇಡ್​ ದಾಳಿಯಾಗಿತ್ತು. ಅಂದೂ ಕೂಡ ಗ್ರೆನೇಡ್​ ಸ್ಫೋಟಗೊಂಡಿರಲಿಲ್ಲ. ಆದರೆ ರಾಕೆಟ್​ ಅಪ್ಪಳಿಸಿದ ಪರಿಣಾಮ ಗುಪ್ತಚರ ದಳದ ಪ್ರಧಾನ ಕಚೇರಿ ಗೋಡೆ-ಕಿಟಕಿಗಳು ಪುಡಿಯಾಗಿದ್ದವು. ಅದೂ ಕೂಡ ಖಲಿಸ್ತಾನಿ ಬೆಂಬಲಿತ ಭಯೋತ್ಪಾದಕರ ಕೃತ್ಯವೆಂದೇ ಸಾಬೀತಾಗಿತ್ತು. ಆ ದಾಳಿಯಲ್ಲಿ ಪ್ರಮುಖವಾಗಿ ಹೆಸರು ಕೇಳಿಬಂದಿದ್ದು ಭಯೋತ್ಪಾದಕ ಹರ್ವಿಂದರ್​ ಸಿಂಗ್​ ರಿಂಡಾನದ್ದು. ಈತ ಇತ್ತೀಚೆಗೆ ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾನೆ. ಆತನನ್ನು ಇನ್ನೊಂದು ಗ್ಯಾಂಗ್​ಸ್ಟರ್​ ಗುಂಪು ಹೊಡೆದು ಕೊಂದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮೊಹಾಲಿ ಗುಪ್ತಚರ ದಳ ಪ್ರಧಾನ ಕಚೇರಿ ದಾಳಿ ಹಿಂದೆ ಸಿಖ್‌ ಫಾರ್‌ ಜಸ್ಟೀಸ್‌; 20 ಮಂದಿ ಬಂಧನ

Exit mobile version