ಹಲವು ವರ್ಷಗಳಿಂದಲೂ ಕಿಡ್ನಿ (ಮೂತ್ರಪಿಂಡ) ಸಮಸ್ಯೆಯಿಂದ ಬಳಲುತ್ತಿರುವ ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಶೀಘ್ರದಲ್ಲೇ ಸಿಂಗಾಪುರದಲ್ಲಿ ಕಿಡ್ನಿ ಕಸಿಗೆ ಒಳಗಾಗಲಿದ್ದಾರೆ. ಒಂದು ಮಹತ್ವದ ಸಂಗತಿಯೆಂದರೆ, ಲಾಲೂ ಪ್ರಸಾದ್ ಯಾದವ್ಗೆ ಅವರ ಪುತ್ರಿ, ರೋಹಿಣಿ ಆಚಾರ್ಯ ಅವರೇ ಕಿಡ್ನಿ ದಾನ ಮಾಡಲಿದ್ದಾರೆ. ಇದಕ್ಕೆ ವೈದ್ಯರೂ ಅನುಮತಿ ನೀಡಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ರೋಹಿಣಿ ಆಚಾರ್ಯ ಸಿಂಗಾಪುರದಲ್ಲಿಯೇ ನೆಲೆಸಿದ್ದು, ತನ್ನ ತಂದೆಯನ್ನು ಉಳಿಸಿಕೊಳ್ಳಲು ಅತ್ಯಂತ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಲಾಲೂ ಪ್ರಸಾದ್ ಯಾದವ್ ಅವರು ಸಿಂಗಾಪುರದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗಷ್ಟೇ ದೆಹಲಿಗೆ ವಾಪಸ್ ಆಗಿ, ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶೀಘ್ರದಲ್ಲೇ ಅವರಿಗೆ ಮೂತ್ರಪಿಂಡ ಕಸಿ ಮಾಡಲೇಬೇಕು ಎಂದು ಸಿಂಗಾಪುರ ಆಸ್ಪತ್ರೆ ವೈದ್ಯರು ಸೂಚಿಸಿರುವುದರಿಂದ, ನವೆಂಬರ್ 20ರಿಂದ 24ರೊಳಗೆ ಅವರು ಮತ್ತೆ ಸಿಂಗಾಪುರಕ್ಕೆ ತೆರಳಲಿದ್ದಾರೆ. ಇನ್ನು ಮಗಳು ರೋಹಿಣಿ ತನಗೆ ಕಿಡ್ನಿ ಕೊಡುವುದು ಬೇಡ ಎಂದೇ ಲಾಲೂ ಪ್ರಸಾದ್ ಯಾದವ್ ಹೇಳಿದ್ದರು. ಅದಕ್ಕೆ ಮೊದಲು ಅವರು ಒಪ್ಪಿರಲೂ ಇಲ್ಲ. ಆದರೆ ರೋಹಿಣಿ ಆಚಾರ್ಯ ಅವರೇ ಬಲವಂತದಿಂದ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ 9-10ರಂದು ದೆಹಲಿಯಲ್ಲಿ ಆರ್ಜೆಡಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ನಡೆದಿತ್ತು. ಅಲ್ಲಿ ಲಾಲೂ ಅವರು ಸತತ 12ನೇ ಬಾರಿಗೆ ಪಕ್ಷದ ಮುಖ್ಯಸ್ಥರಾಗಿ ಆಯ್ಕೆಯಾದರು. ಅದಾದ ಬಳಿಕ ಅಕ್ಟೋಬರ್ 12ರಂದು ತಪಾಸಣೆಗಾಗಿ ಸಿಂಗಾಪುರಕ್ಕೆ ಹೋಗಿದ್ದರು. ಅವರೊಂದಿಗೆ ಪತ್ನಿ ರಾಬ್ರಿದೇವಿ ಮತ್ತು ಹಿರಿಯ ಮಗಳು ಮಿಸಾ ಭಾರ್ತಿ ಕೂಡ ತೆರಳಿದ್ದರು. ಎಲ್ಲ ರೀತಿಯ ತಪಾಸಣೆಯೂ ಮುಗಿದ ಬಳಿಕ ಕಿಡ್ನಿ ಕಸಿ ಅನಿವಾರ್ಯ ಎಂದೇ ವೈದ್ಯರು ಒತ್ತಿ ಹೇಳಿದ್ದಾರೆ. ಮಗಳು ರೋಹಿಣಿ ಸಿದ್ಧರಾಗಿದ್ದು, ವೈದ್ಯರು ಆಕೆಯನ್ನೂ ಸಂಪೂರ್ಣವಾಗಿ ತಪಾಸಣೆ ಮಾಡಿಯೇ ಒಪ್ಪಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲಿ ತೆಲಂಗಾಣ ಸಿಎಂ ಕೆಸಿಆರ್; ನಿತೀಶ್ ಕುಮಾರ್, ತೇಜಸ್ವಿ ಯಾದವ್ ಭೇಟಿ, ಜಂಟಿ ಸುದ್ದಿಗೋಷ್ಠಿ