Site icon Vistara News

Rohini Court Shootout: ಗ್ಯಾಂಗ್​ಸ್ಟರ್​ ಟಿಲ್ಲು ತಾಜ್​​ಪುರಿಯಾನನ್ನು ತಿಹಾರ್​ ಜೈಲಲ್ಲೇ ಹತ್ಯೆಗೈದ ಶತ್ರು ಗ್ಯಾಂಗ್​

Rohini court shootout Gangster Tillu Tajpuriya In Tihar Jail

#image_title

ನವ ದೆಹಲಿ: 2021ರ ದೆಹಲಿಯ ರೋಹಿಣಿ ಕೋರ್ಟ್​ ಶೂಟೌಟ್ (Rohini Court Shootout)​​ ಕೇಸ್​​ನಲ್ಲಿ ಆರೋಪಿಯಾಗಿ ತಿಹಾರ್​ ಜೈಲು ಸೇರಿದ್ದ ಗ್ಯಾಂಗ್​ಸ್ಟರ್​ ಟಿಲ್ಲು ತಾಜ್​​ಪುರಿಯಾ(Tillu Tajpuriya)ನನ್ನು ಅದೇ ಜೈಲಿನಲ್ಲಿಯೇ ಹತ್ಯೆಗೈಯ್ಯಲಾಗಿದೆ. ಇದೇ ಜೈಲಿನಲ್ಲಿದ್ದ ವೈರಿ ಗ್ಯಾಂಗ್​​ನ ಗ್ಯಾಂಗ್​ಸ್ಟರ್​ಗಳಾದ ಯೋಗೇಶ್​ ಟುಂಡಾ ಮತ್ತು ಇತರರು ಟಿಲ್ಲು ಮೇಲೆ ದಾಳಿ ಮಾಡಿ, ಕೊಲೆ ಮಾಡಿದ್ದಾರೆ. ತಿಹಾರ್​ ಜೈಲಿನಲ್ಲಿ ಬಿಗಿ ಭದ್ರತೆಯ ನಡುವೆಯೂ ಇಂದು ಮುಂಜಾನೆ 6.45ರ ಹೊತ್ತಿಗೆ ಯೋಗೇಶ್​ ಟುಂಡಾ ಮತ್ತು ಅವನ ಸಹಚರರು ಕಬ್ಬಿಣದ ರಾಡ್​​ನಲ್ಲಿ ಟಿಲ್ಲು ವನ್ನು ಥಳಿಸಿದ್ದರು. ಗಾಯಗೊಂಡಿದ್ದ ಆತನನ್ನು ದೀನ್ ದಯಾಳ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅಷ್ಟರಲ್ಲಿ ಟಿಲ್ಲು ಜೀವ ಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿದ ದೆಹಲಿ ಪೊಲೀಸ್​ ಪಶ್ಚಿಮ ವಲಯದ ಹೆಚ್ಚುವರಿ ಡಿಸಿಪಿ ಅಕ್ಷತ್​ ಕೌಶಲ್​ ಅವರು ‘ಟಿಲ್ಲು ತಾಜ್​ಪುರಿಯಾ ಮೇಲೆ ದಾಳಿ ಮಾಡಿದ್ದು ಯೋಗೇಶ್​ ಅಲಿಯಾಸ್​ ಟುಂಡಾ ಮತ್ತು ದೀಪಕ್​ ಅಲಿಯಾಸ್​ ಟೀಟರ್​ ಮತ್ತು ಇತರ ಕೆಲವು ಕೈದಿಗಳು. ಇದರಲ್ಲಿ ಯೋಗೇಶ್​ ಮತ್ತು ಅವನ ಸಹಚರರು ಸೆಲ್​ ನಂಬರ್​ 8ರಲ್ಲಿ ಇದ್ದರೆ, ಟಿಲ್ಲು ತಾಜ್​ಪುರಿಯಾ ಸೆಲ್​ ನಂಬರ್​ 9ರಲ್ಲಿ ಇದ್ದ. ಈ ಎರಡೂ ಕೊಠಡಿಗಳನ್ನು ಬೇರ್ಪಡಿಸುವ ಕಬ್ಬಿಣದ ಗ್ರಿಲ್​ನ್ನು ಮುರಿದು ಯೋಗೇಶ್​ ಮತ್ತು ಸಹಚರರು ಟಿಲ್ಲು ಕೊಠಡಿಗೆ ನುಗ್ಗಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿಯ ಸಾಕೇತ್​ ಕೋರ್ಟ್​​ನೊಳಗೆ ಮಹಿಳೆಗೆ ಗುಂಡೇಟು; ಆಸ್ಪತ್ರೆಗೆ ದಾಖಲು ಮಾಡಿದ ಪೊಲೀಸ್ ಅಧಿಕಾರಿ

2021ರ ಸೆಪ್ಟೆಂಬರ್​ 24ರಂದು ರೋಹಿಣಿ ಕೋರ್ಟ್​ನ ರೂಮ್​ ನಂಬರ್​​ 207ಕ್ಕೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ, ಅಲ್ಲಿಗೆ ಅಂದು ವಿಚಾರಣೆಗೆ ಬಂದಿದದ್ದ ಗ್ಯಾಂಗ್​ಸ್ಟರ್​ ಜಿತೇಂದ್ರ ಮನ್​ ಅಲಿಯಾಸ್​ ಗೋಗಿಯನ್ನು ಕೊಂದಿದ್ದರು. ಹಾಗೆ ಬಂದ ದುಷ್ಕರ್ಮಿಗಳು ಇಬ್ಬರೂ ವಕೀಲರ ವೇಷದಲ್ಲಿ ಆಗಮಿಸಿದ್ದರು. ಇವರಿಬ್ಬರನ್ನೂ ಪೊಲೀಸರು ಸ್ಥಳದಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಿದ್ದರು. ವಿಚಾರಣೆ/ತನಿಖೆಯ ಬಳಿಕ ಶೂಟರ್​ಗಳಿಬ್ಬರೂ ಟಿಲ್ಲು ತಾಜ್​ಪುರಿಯಾ ಗ್ಯಾಂಗ್​​ನವರು ಎಂಬುದು ಖಚಿತವಾಗಿತ್ತು. ಅವನನ್ನು ಬಂಧಿಸಿ ತಿಹಾರ್​ ಜೈಲಿನಲ್ಲಿ ಇಡಲಾಗಿತ್ತು. ಇನ್ನು ರೋಹಿಣಿ ಕೋರ್ಟ್​ನಲ್ಲಿ ಕೊಲ್ಲಲ್ಪಟ್ಟ ಗೋಗಿ ಕೂಡ ಅನೇಕ ಕೇಸ್​​ನಲ್ಲಿ ಬೇಕಾದವನಾಗಿದ್ದು, 2020ರಿಂದ ಕೋರ್ಟ್​​ನಲ್ಲಿದ್ದ. ಈಗ ಟಿಲ್ಲುವನ್ನು ಹತ್ಯೆ ಮಾಡಿದವರು ಅದೇ ಗೋಗಿ ಗ್ಯಾಂಗ್​​ನವರು ಎನ್ನಲಾಗಿದೆ.

Exit mobile version