ಲಖನೌ: ಉತ್ತರಪ್ರದೇಶದಲ್ಲಿ ಕೊವಿಡ್ 19ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರಿಹಾರ ಘೋಷಣೆ ಮಾಡಿದ್ದಾರೆ. ಮಾಧ್ಯಮ ಸಿಬ್ಬಂದಿಯ ವೃತ್ತಿನಿಷ್ಠತೆ, ಧೈರ್ಯ ಮತ್ತು ಸಮಾಜಕ್ಕೆ ಅವರು ನೀಡುತ್ತಿರುವ ಕೊಡುಗೆಗಳನ್ನು ಶ್ಲಾಘಿಸಿದ ಅವರು, ಕೊರೊನದಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಧನಸಹಾಯ ಮಾಡುವುದಾಗಿ ಹೇಳಿದರು. ಸುಮಾರು 53 ಕುಟುಂಬಗಳು ಈ ನೆರವು ಪಡೆಯಲಿವೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದ ಉತ್ತಮ ಆಡಳಿತ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ‘ ಕೊವಿಡ್ 19 ಪ್ರಾರಂಭವಾದಾಗಿನಿಂದಲೂ ರಾಜ್ಯದಲ್ಲಿ 103 ಪತ್ರಕರ್ತರು ಈ ಸೋಂಕಿಗೆ ಬಲಿಯಾಗಿದ್ದಾರೆ. 2021ರ ಜುಲೈನಲ್ಲಿ 50 ಮೃತ ಪತ್ರಕರ್ತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಈಗ 53 ಕುಟುಂಬಗಳಿಗೆ ನೆರವು ನೀಡಲಾಗುವುದು. ಈ ಸಲ ಪರಿಹಾರಕ್ಕಾಗಿ 5.30 ಕೋಟಿ ರೂ. ಮೀಸಲಿಡಲಾಗಿದೆ ಎಂದು ಸಿಎಂ ಯೋಗಿ ತಿಳಿಸಿದರು.
ಇದೇ ವೇಳೆ ಪತ್ರಕರ್ತರ ಕಾರ್ಯವೈಖರಿಯನ್ನು ಯೋಗಿ ಆದಿತ್ಯನಾಥ್ ಹೊಗಳಿದರು. ‘ಪತ್ರಕರ್ತರು ಮತ್ತು ಸರ್ಕಾರಗಳ ಗುರಿಗಳು ಒಂದೇ. ಆದರೆ ನಡೆಯುವ ಹಾದಿ ಬೇರೆಬೇರೆಯಷ್ಟೇ. ಮಾಧ್ಯಮಗಳು ಮತ್ತು ಸರ್ಕಾರ ಎರಡೂ ಸಂಸ್ಥೆಗಳೂ ಕೆಲಸ ಮಾಡುವುದು ಸಾರ್ವಜನಿಕರ ಮತ್ತು ಈ ದೇಶದ ಒಳಿತಿಗಾಗಿ’ ಎಂದು ಹೇಳಿದರು. ಹಾಗೇ, ನಮ್ಮ ಸರ್ಕಾರ ಪತ್ರಕರ್ತರಿಗೆ ವಸತಿ ಸೌಕರ್ಯ ನೀಡುವ ಬಗ್ಗೆಯೂ ಚಿಂತನೆ ನಡೆಸಿದೆ. ಗೋರಖ್ಪುರದಲ್ಲಿ ಇದರ ಮಾದರಿ ಕಾರ್ಯ ನಡೆಯುತ್ತಿದೆ. ಅದು ಯಶಸ್ವಿಯಾದರೆ ಖಂಡಿತ ಪತ್ರಕರ್ತರಿಗೆ ವಸತಿ ಸೌಕರ್ಯ ಯೋಜನೆ ಜಾರಿಗೊಳಿಸುತ್ತೇವೆ. ಈ ಸಂಬಂಧ ನೀತಿ ರಚನೆ ಮತ್ತು ಅರ್ಹತಾ ಮಾನದಂಡ ನಿರ್ಧರಿಸಲು ಸಂಪಾದಕರ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಕೊವಿಡ್ 19 ಸೋಂಕಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಜತೆ, ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನೂ ಮಾಧ್ಯಮಗಳು ನಿರಂತರವಾಗಿ ಮಾಡಿಕೊಂಡು ಬಂದಿವೆ. ಕೊರೊನಾ ಉತ್ತುಂಗದಲ್ಲಿ ಇದ್ದಾಗಲೂ ಕರ್ತವ್ಯಪರತೆ ಮೆರೆದಿದ್ದಾರೆ. ಮಾಧ್ಯಮದವ ಅತ್ಯುತ್ತಮ ಕಾರ್ಯವನ್ನು ವಿಶ್ವಸಂಸ್ಥೆ ಮತ್ತು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಈಗಾಗಲೇ ಶ್ಲಾಘಿಸಿದ್ದಾರೆ ಎಂದೂ ಯೋಗಿ ಆದಿತ್ಯನಾಥ್ ತಿಳಿಸಿದರು.
ಇದನ್ನೂ ಓದಿ: Karnataka Elections | ಒಂದೇ ತಿಂಗಳ ಅವಧಿಯಲ್ಲಿ ರಾಜ್ಯಕ್ಕೆ ನಡ್ಡಾ, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್