ನವ ದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಈಗ ತನ್ನ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಪ್ರೊಫೈಲ್ಗೆ ರಾಷ್ಟ್ರಧ್ವಜದ ಫೋಟೋ ಹಾಕಿಕೊಂಡಿದೆ. ಅದರ ಟ್ವಿಟರ್, ಫೇಸ್ಬುಕ್ಗಳ ಡಿಪಿಯಲ್ಲೆಲ್ಲ ರಾಷ್ಟ್ರಧ್ವಜ ರಾರಾಜಿಸುತ್ತಿದೆ. ಕಳೆದ ತಿಂಗಳ ಅಂತ್ಯದ ಮನ್ ಕೀ ಬಾತ್ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ‘ನಮ್ಮ ರಾಷ್ಟ್ರಧ್ವಜ ವಿನ್ಯಾಸಕಾರ ಪಿಂಗಳಿ ವೆಂಕಯ್ಯನವರ ಜನ್ಮದಿನ ಆಗಸ್ಟ್ 2ರಂದು ಇರುವ ಹಿನ್ನೆಲೆಯಲ್ಲಿ, ಆಗಸ್ಟ್ 2ರಿಂದ 15ರವರೆಗೆ ಪ್ರತಿಯೊಬ್ಬರೂ ಸೋಷಿಯಲ್ ಮೀಡಿಯಾಗಳ ಪ್ರೊಫೈಲ್ಗೆ ರಾಷ್ಟ್ರಧ್ವಜದ ಫೋಟೋ ಹಾಕುವಂತೆ ಕರೆ ನೀಡಿದ್ದರು. ಅದನ್ನೂ ಕೂಡ ಅನೇಕರು, ಒಪ್ಪಿ ತಮ್ಮ ಸಾಮಾಜಿಕ ಮಾಧ್ಯಮಗಳ ಡಿಸ್ಪ್ಲೇ ಫೋಟೋ ಬದಲಿಸಿಕೊಂಡಿದ್ದರು. ಆದರೆ ಆರ್ಎಸ್ಎಸ್ ತನ್ನ ಪ್ರೊಫೈಲ್ಗೆ ರಾಷ್ಟ್ರಧ್ವಜ ಹಾಕಿಕೊಂಡಿರಲಿಲ್ಲ. ಬಿಜೆಪಿ ಕೇಂದ್ರ ಸರ್ಕಾರ ಕೊಟ್ಟ ಕರೆಗೆ ಅದರ ಸಂಘಪರಿವಾರವೇ ಸ್ಪಂದಿಸುತ್ತಿಲ್ಲವೆಂಬ ಟೀಕೆಯೂ ವ್ಯಕ್ತವಾಗಿತ್ತು. ಈ ವಿಷಯವೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿತ್ತು.
ರಾಷ್ಟ್ರಧ್ವಜವನ್ನು ಆರ್ಎಸ್ಎಸ್ ಆದರಿಸುವುದಿಲ್ಲ ಎಂಬ ಆರೋಪವನ್ನು ಕಾಂಗ್ರೆಸ್ ಕೂಡ ಮಾಡುತ್ತಲೇ ಬಂದಿದೆ. ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ಗೆ ರಾಷ್ಟ್ರಧ್ವಜದ ಚಿತ್ರ ಹಾಕಿ ಎಂದು ಕರೆಕೊಟ್ಟರೂ ಆರ್ಎಸ್ಎಸ್ ಅದನ್ನು ಪಾಲಿಸಿಲ್ಲ ಎಂದು ಈ ಬಾರಿಯೂ ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಹಾಗೇ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರತಿಕ್ರಿಯೆ ನೀಡಿ ‘ಆರ್ಎಸ್ಎಸ್ ಕಳೆದ 52 ವರ್ಷಗಳಿಂದ ಅದರ ನಾಗ್ಪುರದ ಪ್ರಧಾನ ಕಚೇರಿಯಲ್ಲೇ ರಾಷ್ಟ್ರಧ್ವಜ ಹಾರಿಸಿಲ್ಲ, ಅಂದ ಮೇಲೆ ಪ್ರೊಫೈಲ್ ಫೋಟೋಕ್ಕೆ ತ್ರಿವರ್ಣ ಧ್ವಜದ ಫೋಟೋ ಹಾಕುತ್ತದೆಯೇ’ ಎಂದು ವ್ಯಂಗ್ಯವಾಡಿದ್ದರು.
ಶುಕ್ರವಾರ ಮಾತನಾಡಿದ್ದ ಆರ್ಎಸ್ಎಸ್ ಪ್ರಚಾರ ಸಮಿತಿ ಸಹ ಉಸ್ತುವಾರಿ ನರೇಂದ್ರ ಠಾಕೂರ್ ಮಾತನಾಡಿ ‘ರಾಷ್ಟ್ರಾದ್ಯಂತ ಇರುವ ಎಲ್ಲ ಆರ್ಎಸ್ಎಸ್ ಕಚೇರಿಗಳಲ್ಲೂ ರಾಷ್ಟ್ರಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನ ಆಚರಿಸಲಾಗುವುದು’ ಎಂದು ಹೇಳಿದ್ದರು. ಅಷ್ಟೇ ಅಲ್ಲ, ‘ಆಗಸ್ಟ್ 13-15ರವರೆಗೆ ನಡೆಯಲಿರುವ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಆರ್ಎಸ್ಎಸ್ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ’ ಎಂದೂ ತಿಳಿಸಿದ್ದರು. ಹಾಗೇ, ಈ ಅಭಿಯಾನದ ಅಂಗವಾಗಿ ಚಾಮರಾಜಪೇಟೆಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ರಾಜ್ಯ ಕೇಂದ್ರ ಕಚೇರಿ ಕೇಶವಕೃಪಾದಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಲಾಗಿದೆ.
ಇದನ್ನೂ ಓದಿ: Amrit Mahotsav | ಹರ್ ಘರ್ ತಿರಂಗಾ ಅಭಿಯಾನ: ಉಷಾ ಮಂಗೇಶ್ಕರ್‌ಗೆ ತ್ರಿವರ್ಣ ಧ್ವಜ ನೀಡಿದ ಸಿ.ಟಿ ರವಿ