Site icon Vistara News

ಜನಸಂಖ್ಯಾ ವಿವಾದ: ಪ್ರಾಣಿ, ಮನುಷ್ಯರ ನಡುವಿನ ವ್ಯತ್ಯಾಸ ತಿಳಿಸಿದ ಮೋಹನ್‌ ಭಾಗವತ್‌

India is not authoritative nation like America, Russia and China, Says RSS

ನವ ದೆಹಲಿ: ಸದ್ಯ ವಿಶ್ವದಲ್ಲಿ ಜನಸಂಖ್ಯೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ಆದರೆ 2023ರ ಹೊತ್ತಿಗೆ ಚೀನಾವನ್ನು ಭಾರತ ಹಿಂದಿಕ್ಕಲಿದೆ ಎಂದು ವಿಶ್ವಸಂಸ್ಥೆ ಇತ್ತೀಚೆಗೆ ವರದಿ ನೀಡಿದೆ. ಅದರ ಬೆನ್ನಲ್ಲೇ ವಿಶ್ವ ಜನಸಂಖ್ಯಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ್ದ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮಾತನಾಡಿ, “ಜನಸಂಖ್ಯೆ ನಿಯಂತ್ರಣಕ್ಕಾಗಿ ಇರುವ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಅದರ ಜತೆಗೆ ಜನಸಂಖ್ಯೆ ಅಸಮತೋಲನ ಆಗದಂತೆಯೂ ನೋಡಿಕೊಳ್ಳಬೇಕು. ಸಮಾಜದಲ್ಲಿ ಯಾವುದೇ ಒಂದು ವರ್ಗದ ಜನರ ಸಂಖ್ಯೆ ಹೆಚ್ಚಾಗಬಾರದು. ಜಾತಿ, ಧರ್ಮ, ಪ್ರದೇಶ, ಭಾಷೆಯನ್ನೂ ಮೀರಿ ಜನಸಂಖ್ಯೆ ಬೆಳೆಯುತ್ತಿದೆ. ಇದನ್ನು ಒಟ್ಟಾರೆಯಾಗಿ ಸ್ಥಿರಗೊಳಿಸಲು ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದರು.

ಯೋಗಿ ಆದಿತ್ಯನಾಥ್‌ ಅವರ ಹೇಳಿಕೆಯನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ, ಬಹುಜನ ಸಮಾಜ ಪಾರ್ಟಿ ಮಾಯಾವತಿ ಮತ್ತಿತರರು ಖಂಡಿಸಿದ್ದರು. ಅದರ ಬೆನ್ನಲ್ಲೇ ಈಗ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಯೋಗಿ ಆದಿತ್ಯನಾಥ್‌ ಮಾತುಗಳನ್ನು ಬೆಂಬಲಿಸಿದ್ದಾರೆ. ಹ್ಯೂಮನ್‌ ಎಕ್ಸಲೆನ್ಸ್‌ನ ಶ್ರೀ ಸತ್ಯ ಸಾಯಿ ಯೂನಿರ್ವಸಿಟಿಯ ಮೊದಲ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ನೇರವಾಗಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಏನೂ ಹೇಳದೆ ಇದ್ದರೂ, ಪ್ರಾಣಿಗಳಿಗೂ -ಮನುಷ್ಯರಿಗೂ ಇರುವ ವ್ಯತ್ಯಾಸವನ್ನು ತಿಳಿಸುವ ಮೂಲಕ, ತಮ್ಮ ಬೆಂಬಲ ಜನಸಂಖ್ಯೆ ನಿಯಂತ್ರಣಕ್ಕೆ ಎಂದು ಹೇಳಿದ್ದಾರೆ.

“ಈ ಭೂಮಿ ಮೇಲೆ ಪ್ರಾಣಿಗಳೂ ಜೀವಿಸಿವೆ. ಮನುಷ್ಯರೂ ಇದ್ದಾರೆ. ಬುದ್ಧಿಯೊಂದು ಇಲ್ಲದೆ ಇದ್ದಿದ್ದರೆ ಮನುಷ್ಯ ಈ ಭೂಮಿ ಮೇಲಿನ ಅತ್ಯಂತ ದುರ್ಬಲ ಜೀವಿ ಎನ್ನಿಸಿಕೊಳ್ಳುತ್ತಿದ್ದ. ಅರಿವಿನ ಸಾಮರ್ಥ್ಯವೆಂಬುದು ಅವನನ್ನು ಉತ್ತಮನನ್ನಾಗಿ ಮಾಡಿದೆ. ಪ್ರಾಣಿಗಳು ತಿನ್ನುತ್ತವೆ. ಕುಡಿಯುತ್ತವೆ, ತಮ್ಮ ತಳಿಯ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತವೆ. ಯಾರು ಬಲಿಷ್ಠರೋ ಅವರು ಅಪಾಯಗಳಿಂದ ಪಾರಾಗುತ್ತಾರೆ- ಉಳಿಯುತ್ತಾರೆ ಎಂಬುದು ಕಾಡಿನ ಕಾನೂನು. ಆದರೆ ನಾಡಿನಲ್ಲಿ ಈ ನಿಯಮ ಇರಬಾರದು. ಬುದ್ಧಿಯಿರುವ, ಅರಿವಿರುವ ಮನುಷ್ಯರು ಬದುಕುವ ಕ್ರಮ ಹೀಗಿರಬಾರದು. ಬಲಿಷ್ಠರು ದುರ್ಬಲರಿಗೆ ಜೀವಿಸಲು ಸಹಾಯ ಮಾಡಬೇಕು. ಸಮರ್ಥರು ಅಶಕ್ತರನ್ನು ಜತೆಗೇ ಕರೆದುಕೊಂಡು ಹೋಗಬೇಕು. ಒಟ್ಟಾರೆ ಈ ಜಗತ್ತಿನ ಉಳಿವಿಗೆ ಮನುಷ್ಯರು ತಮ್ಮ ಸ್ವ ಕಸುವನ್ನು ಬಳಸಬೇಕು. ಇದು ಮಾನವ ಶ್ರೇಷ್ಠತೆ ಎನ್ನಿಸಿಕೊಳ್ಳುತ್ತದೆʼ ಎಂದು ಮೋಹನ್‌ ಭಾಗವತ್‌ ಹೇಳಿದ್ದಾರೆ.

ಇದನ್ನೂ ಓದಿ: ವಿಸ್ತಾರ Fact Check: ಮೋಹನ್‌ ಭಾಗವತ್‌ ಜತೆ ದ್ರೌಪದಿ ಮುರ್ಮು?; ಫೋಟೊ ಹಿಂದಿನ ಸತ್ಯವೇನು?

ಅಂದರೆ, ಮನುಷ್ಯರ ಜೀವನವೂ ಕೇವಲ ತಿನ್ನು-ಉಣ್ಣು, ಜನಸಂಖ್ಯೆ ಜಾಸ್ತಿ ಮಾಡುವುದರಲ್ಲೇ ಕಳೆದುಹೋಗಬಾರದು. ಅದರಾಚೆಗೆ ತಮ್ಮ ಬದುಕಿನ ಅರ್ಥವೇನು? ಹೇಗಿರಬೇಕು ಎಂಬುದನ್ನೆಲ್ಲ ಅರಿತು ಅದರಂತೆ ಜೀವಿಸಬೇಕು ಎಂದಿದ್ದಾರೆ. ಬಹುಸಂಖ್ಯಾತ- ಅಲ್ಪಸಂಖ್ಯಾತ ಪರಿಕಲ್ಪನೆಯ ಸೂಕ್ಷ್ಮತೆಗಳನ್ನು ತಮ್ಮ ಈ ಮಾತುಗಳಲ್ಲಿ ತಿಳಿಸಿದ್ದಾರೆ. ಯಾವುದೇ ಸಮುದಾಯಕ್ಕೆ ತಾವು ಬಹುಸಂಖ್ಯಾತರಾಗಬೇಕು ಎಂಬುದೇ ಧ್ಯೇಯವಾಗಬಾರದು. ಬಹುಸಂಖ್ಯಾತರಿದ್ದೇವೆ ಎಂಬ ಮಾತ್ರಕ್ಕೆ ಅಲ್ಪ ಸಂಖ್ಯಾತರಿಗೆ ಜೀವಿಸಲು ತೊಂದರೆ ಕೊಡಬಾರದು ಎಂದು ಮೋಹನ್‌ ಭಾಗವತ್‌ ಹೀಗೆ ಪ್ರಾಣಿ-ಮನುಷ್ಯನ ಉದಾಹರಣೆಯೊಂದಿಗೆ ವಿವರಿಸಿದ್ದಾರೆ ಎಂದು ಅವರ ಮಾತುಗಳನ್ನು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ರಾಜಕೀಯದಿಂದ ಆರ್‌ಎಸ್‌ಎಸ್‌ ದೂರ, ಸಂಘಕ್ಕೆ ರಾಜಕೀಯ ಹೊಂದುವುದಿಲ್ಲ: ಡಾ. ಮೋಹನ್‌ ಭಾಗವತ್‌

Exit mobile version