ಭೋಪಾಲ್: ಭಾರತದಲ್ಲಿ ಗೋ ಹತ್ಯೆ ನಿಷೇಧಿಸುವಂತೆ ಆರ್ಎಸ್ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಸಂಸ್ಥಾಪಕ ಕೆ ಬಿ ಹೆಡ್ಗೆವಾರ್ ಸ್ವಾತಂತ್ರ್ಯಪೂರ್ವದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿಯೇ ಪ್ರಸ್ತಾಪಿಸಿದ್ದರು ಎಂದು ಆರ್ಎಸ್ಎಸ್ ಸರ ಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದ ದ್ವಿತೀಯ ವರ್ಷದ ವಿಶ್ವ ಸಂಘ ಶಿಕ್ಷಾ ವರ್ಗದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರದ ಉತ್ಥಾನ ಬಗ್ಗೆಯೂ ಅನೇಕ ವಿಚಾರ ತಿಳಿಸಿದರು.
“1920ರ ನಾಗ್ಪುರದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾತ್ಮ ಗಾಂಧೀಜಿ ಅವರ ಭಾಷಣದಲ್ಲಿ ಎರಡು ಪ್ರಸ್ತಾಪಗಳನ್ನು ಘೋಷಿಸಬೇಕು ಎಂದು ಹೆಡ್ಗೆವಾರ್ ಹೇಳಿದ್ದರು. ಅದರಲ್ಲಿ ಮೊದಲನೆಯದಾಗಿ ಗೋಹತ್ಯೆ ನಿಷೇಧ, ಮತ್ತೊಂದು ಭಾರತದ ಸಂಪೂರ್ಣ ಸ್ವಾತಂತ್ರ್ಯ ನಮ್ಮ ಧ್ಯೇಯ ಎಂದು ಕಾಂಗ್ರೆಸ್ ಘೋಷಿಸಬೇಕು ಎಂದು ಹೆಡ್ಗೆವಾರ್ ಆಗ್ರಹಿಸಿದ್ದರುʼʼ ಎಂದು ಭಾಗವತ್ ನೆನಪಿಸಿಕೊಂಡರು.
“‘ಚೀನಿಯರು, ಆಂಗ್ಲರ ಆಡಳಿತದಿಂದ ಭಾರತ ಮುಕ್ತವಾಗಬೇಕು. ವಿಶ್ವಾದ್ಯಂತ ಭಾರತದ ಸನಾತನ ಧರ್ಮ ಪಸರಿಸಬೇಕು. ಸಂಘದ ಪ್ರಮುಖದ ಉದ್ದೇಶ ಹಿಂದೂ ಧರ್ಮದ ಉದ್ಧಾರ. ಹಿಂದೂ ರಾಷ್ಟ್ರವಾಗಿ ಹಿಂದೂಸ್ತಾನವನ್ನು ರೂಪುಗೊಳಿಸುವುದು. ಸ್ವಾಮಿ ವಿವೇಕಾನಂದರ ಕಲ್ಪನೆಯ ಭಾರತ ತನ್ನ ಸ್ವಾರ್ಥಕ್ಕಾಗಿ ಇಲ್ಲ, ಇಡೀ ಜಗತ್ತಿಗಾಗಿ ಇದೆʼʼ ಎಂದವರು ಹೇಳಿದರು.
ಶಿಬಿರದಲ್ಲಿ ಅಮೆರಿಕ, ಕೆನಡಾ, ಸಿಂಗಾಪುರ ಸೇರಿದಂತೆ 13 ದೇಶಗಳ 53 ಸ್ವಯಂಸೇವಕರು, ಸಾಂಚಿ ಬೌದ್ಧ ಭಾರತೀಯ ಅಧ್ಯಯನ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನೀರ್ಜಾ ಗುಪ್ತಾ ಭಾಗವಹಿಸಿದ್ದರು. ಜುಲೈ 18ರಿಂದ ಈ ಕಾರ್ಯಕ್ರಮ ಪ್ರಾರಂಭವಾಗಿತ್ತು. ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಜನರಿಗೆ, ಇಲ್ಲಿನ ಸಂಪ್ರದಾಯ ಪರಿಚಯಿಸುವ ಸಲುವಾಗಿಯೇ ಸಮಾರಂಭ ಆಯೋಜಿಸಲಾಗಿತ್ತು.
ಇದನ್ನೂ ಓದಿ: ಆರ್ಎಸ್ಎಸ್ ಯಾಕೆ ಸೋಷಿಯಲ್ ಮೀಡಿಯಾ ಪ್ರೊಫೈಲ್ಗೆ ರಾಷ್ಟ್ರಧ್ವಜ ಫೋಟೋ ಹಾಕಿಲ್ಲ?