ಭೋಪಾಲ್: ಯಾವುದೇ ವ್ಯಕ್ತಿಯನ್ನಾಗಲೀ, ಸಂಸ್ಥೆಯ ಮೇಲಾಗಲೀ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿಯಂತ್ರಣ ಸಾಧಿಸುವುದಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಭಾಗವತ್, ‘ಆರ್‌ಎಸ್‌ಎಸ್ ಹೆಸರು ಬಂದಾಗ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ಅದಕ್ಕೆ ತಳುಕು ಹಾಕುತ್ತಾರೆ. ನರೇಂದ್ರ ಮೋದಿ ಮತ್ತಿತರ ನಾಯಕರ ಕೆಲಸವನ್ನೂ ಸಂಘವೇ ನಿಯಂತ್ರಿಸುತ್ತದೆ ಎಂಬ ಮಾತುಗಳೂ ಕೇಳಿಬಂದಿವೆ. ಆದರೆ ವಾಸ್ತವದಲ್ಲಿ ಹಾಗಿಲ್ಲ. ಮೋದಿ ಜೀ ಸಂಘದ ಸ್ವಯಂಸೇವಕರೂ ಹೌದು, ಪ್ರಚಾರಕ್ ಕೂಡ ಆಗಿದ್ದಾರೆ. ಆದರೆ ಅವರ ಕೆಲಸವನ್ನು ಅವರು ಸ್ವತಂತ್ರ್ಯವಾಗಿಯೇ ಮಾಡುತ್ತಿದ್ದಾರೆ. ನಾವದರಲ್ಲಿ ನೇರವಾಗಿಯೂ, ಪರೋಕ್ಷವಾಗಿಯೂ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.
‘ಇನ್ನು ವಿಶ್ವ ಹಿಂದು ಪರಿಷತ್ ಕೂಡ ನಮ್ಮ ಸಂಘಕ್ಕೆ ಸೇರಿದ್ದು. ನಮ್ಮ ಸ್ವಯಂಸೇವಕರೇ ಅದನ್ನು ನಡೆಸುತ್ತಾರೆ. ಆದರೆ ವಿಎಚ್ಪಿ ಮಾಡುವ ಕಾರ್ಯಗಳನ್ನು ಆರ್‌ಎಸ್‌ಎಸ್ ನಿಯಂತ್ರಿಸುವುದಿಲ್ಲ ಅಥವಾ ಸಂಘ ಅದರ ಮೇಲೆ ಪ್ರಭುತ್ವ ಸಾಧಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ ಮೋಹನ್ ಭಾಗವತ್, ‘ಆರ್‌ಎಸ್‌ಎಸ್ ಅದರ ಸ್ವಯಂಸೇವಕರೊಂದಿಗೆ ಸಮಾಲೋಚನೆ ನಡೆಸುತ್ತದೆ, ಸಲಹೆಗಳನ್ನೂ ನೀಡುತ್ತದೆ. ಆದರೆ ಹೀಗೇ ಮಾಡಿ, ಹಾಗೇ ಮಾಡಿ ಎಂದು ಅಧಿಕಾರ ಚಲಾಯಿಸುವುದಿಲ್ಲ. ನಮ್ಮ ಮಾತು ಕೇಳಲೇಬೇಕು ಎಂಬ ನಿಯಮವನ್ನೂ ವಿಧಿಸಿಲ್ಲ. ಅವರನ್ನೆಂದಿಗೂ ನಿಯಂತ್ರಿಸುವುದಿಲ್ಲ’ ಎಂದು ಒತ್ತಿ ಹೇಳಿದ್ದಾರೆ.
ಇದೇ ಸಮಾರಂಭದಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿದ ಮೋಹನ್ ಭಾಗವತ್, ‘ಎಲ್ಲವನ್ನೂ-ಎಲ್ಲರನ್ನೂ ಒಳಗೊಳ್ಳುವ ತತ್ವವೇ ಹಿಂದುತ್ವದ ಅರ್ಥ. ನಮ್ಮ ಸಂವಿಧಾನದ ಪೀಠಿಕೆಯಲ್ಲೇ ಅದರ ಉಲ್ಲೇಖವಿದೆ. ಭಾರತವೆಂಬುದು ಭಾಷೆಗಳ, ವ್ಯಾಪಾರ ಹಿತಾಸಕ್ತಿಗಳು, ರಾಜಕೀಯ ಅಧಿಕಾರ ಮತ್ತು ಚಿಂತನೆಗಳ ಆಧಾರದ ಮೇಲೆ ನಿರ್ಮಿತವಾದ ದೇಶವಲ್ಲ. ಇದು ‘ವಸುದೈವ ಕುಟುಂಬಕಂ’ (ಇಡೀ ವಿಶ್ವವೇ ಒಂದು ಕುಟುಂಬ) ಮತ್ತು ‘ವಿವಿಧತೆಯಲ್ಲಿ ಏಕತೆ’ ಎಂಬ ತತ್ವಗಳ ಆಧಾರದಲ್ಲಿ ನಿರ್ಮಾಣಗೊಂಡ ರಾಷ್ಟ್ರ ಎಂದೂ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಎಂದಲ್ಲ, ಬಿಜೆಪಿಯ ಅನೇಕ ನಾಯಕರ ವಿಚಾರಕ್ಕೆ ಬಂದಾಗ ಅವರಿಗೆ ಆರ್ಎಸ್ಎಸ್ನ್ನು ತಳುಕುಹಾಕುವುದು ಇದೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಆರ್‌ಎಸ್‌ಎಸ್ ಸಂಪೂರ್ಣ ಹಸ್ತಕ್ಷೇಪ ಮಾಡುತ್ತದೆ. ಇನ್ನು ಪಕ್ಷದೊಳಗಿನ ಪದಾಧಿಕಾರಿಗಳ ನೇಮಕ, ಸಚಿವ ಸಂಪುಟ ವಿಸ್ತರಣೆ ಇತ್ಯಾದಿಗಳೂ ಕೂಡ ಸಂಘ ಹೇಳಿದಂತೆ ನಡೆಯುತ್ತವೆ ಎಂಬಿತ್ಯಾದಿ ಮಾತುಗಳು ಚಾಲ್ತಿಯಲ್ಲಿವೆ. ಹೀಗಿರುವಾಗ ಮೋಹನ್ ಭಾಗವತ್ ಈ ಮಾತುಗಳನ್ನಾಡಿದ್ದು ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಸವಿಸ್ತಾರ ಅಂಕಣ | ಆರ್‌ಎಸ್‌ಎಸ್ ಚಿಂತನೆಗಳೊಂದಿಗೆ ಬಿಜೆಪಿ ನಾಯಕರ ಆಲೋಚನೆಗಳೇಕೆ ತಾಳೆ ಆಗುತ್ತಿಲ್ಲ?