ನವ ದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪರಿವಾರದ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆರ್ಎಸ್ಎಸ್ನಲ್ಲಿ ಮಹಿಳಾ ಕಾರ್ಯಕರ್ತರು ಅನೇಕರು ಇದ್ದಾರೆ. ಆದರೆ ಪ್ರಮುಖವಾಗಿ ನಿರ್ಧಾರ ಕೈಗೊಳ್ಳುವ ಹುದ್ದೆಗಳಲ್ಲಿ ತುಂಬ ಕಡಿಮೆ ಜನರು ಇದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಇಂಥ ಹುದ್ದೆಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಲು ಆರ್ಎಸ್ಎಸ್ ನಿರ್ಧಾರ ಮಾಡಿದೆ ಎಂದು ಪ್ರಯಾಗ್ರಾಜ್ನಲ್ಲಿ ಆರ್ಎಸ್ಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಸೋಮವಾರ ಸಂಘದ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರ್ಎಸ್ಎಸ್ನ ರಾಷ್ಟ್ರೀಯ ಕಾರ್ಯಕಾರಿಣಿಯ ಎರಡನೇ ದಿನ (ಅ.17)ದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲ ಬೈಟೆಕ್ನಲ್ಲಿ ಮಾತನಾಡಿದ ಹಿರಿಯ ಪದಾಧಿಕಾರಿ, ‘ಆರ್ಎಸ್ಎಸ್ ಮತ್ತು ಅದರ ಎಲ್ಲ ಅಂಗಸಂಸ್ಥೆಗಳಲ್ಲಿ ಒಟ್ಟಾರೆಯಾಗಿ ಮಹಿಳೆಯರ ಪಾತ್ರ ಹೆಚ್ಚಿಸುವ, ಅದರಲ್ಲೂ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಬಗ್ಗೆ ಸಮಗ್ರ ಚರ್ಚೆ ನಡೆಯುತ್ತಿದೆ. ಮಹಿಳಾ ಕಾರ್ಯಕರ್ತರು ನಮ್ಮೆಲ್ಲ ವಿಭಾಗದಲ್ಲೂ ಸಕ್ರಿಯರಾಗಿದ್ದಾರೆ. ಅವರ ಕಾಯಕವನ್ನು ಗುರುತಿಸಿ, ಹೆಚ್ಚಿನ ಜವಾಬ್ದಾರಿ ನೀಡಲಾಗುವುದು. ಈ ಮೂಲಕ ಸಂಘವನ್ನು ಇನ್ನಷ್ಟು ಬಲಪಡಿಸಲಾಗುವುದು‘ ಎಂದು ಹೇಳಿದ್ದಾರೆ.
ಸಾಮಾಜಿಕ ಸೌಹಾರ್ದತೆ ಮೂಡಿಸುವ ಕೆಲಸವನ್ನು ಕೇವಲ ನಗರ ಮಟ್ಟದಲ್ಲಿ ಅಷ್ಟೇ ಅಲ್ಲ, ಗ್ರಾಮಾಂತರ ಪ್ರದೇಶಗಳ ಬ್ಲಾಕ್ ಮಟ್ಟದಲ್ಲೂ ಕೈಗೊಳ್ಳಲಾಗುವುದು. ಇದನ್ನು ಒಂದು ಅಭಿವೃದ್ಧಿ ಕಾರ್ಯವೆಂದೇ ಪರಿಗಣಿಸಲಾಗುವುದು. ಹಾಗೇ, ಆರ್ಎಸ್ಎಸ್ನ ಇಂಥ ಸಭೆಗಳಲ್ಲಿ ಪಾಲ್ಗೊಳ್ಳುವ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವತ್ತ ಪ್ರಯತ್ನ ಮಾಡಲಾಗುವುದು’ ಎಂದೂ ಅವರು ಹೇಳಿದ್ದಾರೆ. ‘ಹಾಗೇ, ದೇಶಾದ್ಯಂತ ಅಂಗನವಾಡಿಗಳು ಮತ್ತು ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಆರ್ಎಸ್ಎಸ್ನಿಂದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಮತ್ತು ಸಂಘದ ಕಾರ್ಯಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಇನ್ನಷ್ಟು ಸಜ್ಜುಗೊಳಿಸುವ ಬಗ್ಗೆಯೂ ಬೈಠೆಕ್ನಲ್ಲಿ ಚರ್ಚೆ ನಡೆದಿದೆ ಎಂದು ಪದಾಧಿಕಾರಿ ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 5ರಂದು ವಿಜಯ ದಶಮಿಯಂದು ಭಾಷಣ ಮಾಡಿದ್ದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ್ದರು.
ಇದನ್ನೂ ಓದಿ: RSS ABKM | 2024ರ ಮಾರ್ಚ್ ವೇಳೆಗೆ 1 ಲಕ್ಷ ಶಾಖೆ ಗುರಿ: ಭಾನುವಾರದಿಂದ ಕಾರ್ಯಕಾರಿ ಮಂಡಳಿ ಸಭೆ