Site icon Vistara News

‘ಸಚಿನ್​ ಪೈಲಟ್​​ರಂಥ ಸಿಎಂ ಬೇಕು’; ಭಾರತ್​ ಜೋಡೋ ಯಾತ್ರೆಯಲ್ಲಿ ರಾಹುಲ್​ ಗಾಂಧಿ ಎದುರೇ ಮೊಳಗಿತು ಯುವಕರ ಘೋಷಣೆ

Sachin Pilot

ದೌಸಾ: ರಾಜಸ್ಥಾನದಲ್ಲಿ ಕಾಂಗ್ರೆಸ್​​ ನಾಯಕರು, ಆ ಪಕ್ಷದ ವರಿಷ್ಠರ ಪಾಲಿಗೆ ಬಿಸಿತುಪ್ಪದಂತೆ ಆಗಿದ್ದಾರೆ. ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಮತ್ತು ಪ್ರಭಾವಿ ನಾಯಕ ಸಚಿನ್​ ಪೈಲಟ್​​ ನಡುವಿನ ಮನಸ್ತಾಪ ಹೈಕಮಾಂಡ್​​ಗೆ ಸದಾ ಬಿಸಿ ಮುಟ್ಟಿಸುತ್ತಲೇ ಇರುತ್ತದೆ..ಮುಜುಗರಕ್ಕೀಡು ಮಾಡುತ್ತಲೇ ಇರುತ್ತದೆ. ಇಲ್ಲಿನ ದೌಸಾದಲ್ಲಿ ನಡೆಯುತ್ತಿರುವ ಭಾರತ್​ ಜೋಡೋ ಯಾತ್ರೆ ವೇಳೆಯೂ ಇಂಥದ್ದೇ ಒಂದು ಸನ್ನಿವೇಶ ಎದುರಾಯಿತು.

ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆ ರಾಜಸ್ಥಾನ ತಲುಪಿದ್ದು, ಇಲ್ಲಿ ಕಳೆದ 12 ದಿನಗಳಿಂದ ರಾಹುಲ್​ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಇಂದು ಬೆಳಗ್ಗೆ ಕಲಾಖೋದಿಂದ ಕಾಲ್ನಡಿಗೆ ಶುರುವಾದ ಕೆಲವೇ ಹೊತ್ತಲ್ಲಿ, ಕಾಂಗ್ರೆಸ್​​ನ ಒಂದಷ್ಟು ಕಾರ್ಯಕರ್ತರು ರಾಹುಲ್ ಗಾಂಧಿ ಜತೆ ಸೇರಿಕೊಂಡರು. ಅವರು ಸುಮ್ಮನೆ ಪಾದಯಾತ್ರೆ ನಡೆಸದೆ ‘ಸಚಿನ್​ ಪೈಲಟ್​’ ಪರವಾಗಿ ಘೋಷಣೆ ಕೂಗಲು ಶುರು ಮಾಡಿದರು. ‘ಸಚಿನ್​ ಪೈಲಟ್​ ಜಿಂದಾಬಾದ್​’, ‘ನಮ್ಮ ಮುಖ್ಯಮಂತ್ರಿ ಹೇಗಿರಬೇಕು… ಸಚಿನ್​ ಪೈಲಟ್​​ರಿಂತಿರಬೇಕು’ ಎಂಬ ಘೋಷಣೆಯನ್ನು ದೊಡ್ಡದಾಗಿ, ನಿರಂತರವಾಗಿ ಕೂಗುತ್ತಲೇ ಇದ್ದರು.

ರಾಜಸ್ಥಾನದಲ್ಲಿ ಅಶೋಕ್​ ಗೆಹ್ಲೋಟ್​ ಮತ್ತು ಸಚಿನ್​ ಪೈಲಟ್​ ಪರಸ್ಪರ ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. ‘ನಾ ಸಿಎಂ ಹುದ್ದೆ ಬಿಡಲೊಲ್ಲೆ’ ಎನ್ನುತ್ತಿರುವ ಗೆಹ್ಲೋಟ್​​ಗೆ ‘ನಾನು ಆ ಹುದ್ದೆ ಪಡೆದೇ ತೀರುತ್ತೇನೆ’ ಎಂಬ ಸವಾಲನ್ನು ಪೈಲಟ್​ ಪರೋಕ್ಷವಾಗಿಯೇ ಹಾಕುತ್ತ ಬಂದಿದ್ದಾರೆ. ಇವರಿಬ್ಬರ ಮುನಿಸು ಹೈಕಮಾಂಡ್​ಗೂ ಕಗ್ಗಂಟಾಗಿ ಪರಿಣಮಿಸಿದೆ. ಕಾಂಗ್ರೆಸ್​ ಆಡಳಿತವೇ ಇರುವ ರಾಜಸ್ಥಾನದ ದೌಸಾ ಸಚಿನ್​ ಪೈಲಟ್​ ಅವರ ಭದ್ರಕೋಟೆ. ಅಲ್ಲಿ ಅವರ ಪ್ರಭಾವ ಬಹಳವಾಗಿದ್ದು, ಅದು ಭಾರತ್ ಜೋಡೋ ಯಾತ್ರೆಯ ವೇಳೆಯೂ ಗೋಚರಿಸಿದೆ. ದೌಸಾದಲ್ಲಿ ಭಾರಿ ಪ್ರಮಾಣದಲ್ಲಿ ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಇದು ಸಚಿನ್​ ಪೈಲಟ್​ಗೆ ಅಲ್ಲಿರುವ ಬೆಂಬಲವನ್ನೂ ತೋರಿಸಿದೆ ಮತ್ತು ಸಚಿನ್​ ಪೈಲಟ್​ ಮುಖ್ಯಮಂತ್ರಿ ಆಗಲೇಬೇಕು ಎಂದು ಅವರು ತಮ್ಮ ಘೋಷಣೆಗಳ ಮೂಲಕ ಆಗ್ರಹಿಸಿದ್ದಾರೆ.!

ಇದನ್ನೂ ಓದಿ: ಭಾರತ್​ ಜೋಡೋ ಯಾತ್ರೆಗೆ ಆರ್​ಬಿಐ ಮಾಜಿ ಗವರ್ನರ್​ ರಘುರಾಮ್​ ರಾಜನ್​ ಸಾಥ್; ರಾಹುಲ್​ ಗಾಂಧಿಯೊಂದಿಗೆ ಕಾಲ್ನಡಿಗೆ

Exit mobile version