Site icon Vistara News

Same Sex Marriage: ಸಲಿಂಗಿಗಳ ಸಮಸ್ಯೆ ಪರಿಶೀಲನೆಗೆ ಸಮಿತಿ ರಚಿಸಲು ಕೇಂದ್ರ ಒಪ್ಪಿಗೆ; ಆಮದು ಮಾಡಿಕೊಂಡಿದ್ದಲ್ಲ ಎಂದ ಸಿಜೆಐ

Same Sex Couple Existence not imported says CJI During Hearing

#image_title

ನವ ದೆಹಲಿ: ಸಲಿಂಗ ವಿವಾಹಕ್ಕೆ ಕಾನೂನಿನಡಿ (Same Sex Marriage) ಮಾನ್ಯತೆ ನೀಡಬೇಕು ಎಂಬ ಬೇಡಿಕೆಯಿಟ್ಟು ಸಲ್ಲಿಕೆಯಾಗಿರುವ ಸುಮಾರು 15 ಮನವಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್​ ನಡೆಸುತ್ತಿದೆ. ಆದರೆ ಭಾರತದಂಥ ಸಾಂಪ್ರದಾಯಿಕ ದೇಶದಲ್ಲಿ ಯಾವ ಕಾರಣಕ್ಕೂ ಸಲಿಂಗ ವಿವಾಹವನ್ನು ಮಾನ್ಯ ಮಾಡಲೇಬಾರದು ಎಂದು ಕೇಂದ್ರ ಸರ್ಕಾರ (Central Government) ಪಟ್ಟು ಹಿಡಿದಿದೆ. ಕಳೆದ ಹಲವು ದಿನಗಳಿಂದಲೂ ಈ ಅರ್ಜಿಗಳ ವಿಚಾರಣೆ ನಡೆಯುತ್ತಿದೆ. ಏಪ್ರಿಲ್ 27ರಂದು ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್​, ಇಂದು (ಮೇ 3) ವಿಚಾರಣೆಯನ್ನು ಮುಂದೂಡಿತ್ತು. ಹಾಗೇ, ಸಲಿಂಗಿ ಜೋಡಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ಕೊಡದೆ ಇದ್ದರೂ, ಅವರಿಗೆ ಸಾಮಾಜಿಕವಾಗಿ ಏನೆಲ್ಲ ಅನುಕೂಲಗಳನ್ನು ಮಾಡಿಕೊಡಬಹುದು ಎಂಬ ಬಗ್ಗೆ ಮೇ 3ರಂದು ಕೋರ್ಟ್ (Supreme Court)​ಗೆ ವಿವರಣೆ ಸಲ್ಲಿಸಿ ಎಂದೂ ಹೇಳಿತ್ತು.

ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ, ದೇಶದ ಹಲವು ಭಾಗಗಳ ಸಲಿಂಗಿಗಳು ಸಲ್ಲಿಸಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುತ್ತಿದೆ. ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ‘ಸಲಿಂಗಿ ಜೋಡಿಗಳು ಅನುಭವಿಸುತ್ತಿರುವ ಕಷ್ಟ, ಸಮಸ್ಯೆಗಳನ್ನು ಪರಿಶೀಲಿಸಲು ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ರಚಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಸುಪ್ರೀಂಕೋರ್ಟ್​ಗೆ ತಿಳಿಸಿದ್ದಾರೆ. ಹೀಗೆ ರಚನೆಯಾಗುವ ಸಮಿತಿಗೆ ಅರ್ಜಿದಾರರೂ ತಮ್ಮ ಸಲಹೆ-ಸೂಚನೆಗಳನ್ನು ಕೊಡಬಹುದು. ಇದರಿಂದ ಅಧ್ಯಯನಕ್ಕೆ ಅನುಕೂಲವಾಗುತ್ತದೆ ಎಂದೂ ಹೇಳಿದ್ದಾರೆ. ಇನ್ನು ಅಟಾರ್ನಿ ಜನರಲ್​ ಆರ್​.ವೆಂಕಟ್ರಮಣಿ ಅವರು ವಾದ ಮಂಡಿಸಿ ‘ವಿಶೇಷ ಮದುವೆ ಕಾಯ್ದೆ ಇರುವುದು ವಿಭಿನ್ನ ಲಿಂಗೀಯ ದಂಪತಿಗೆ. ಇದರಲ್ಲಿ ಸಲಿಂಗಿಗಳ ಮದುವೆಯನ್ನು ಅಳವಡಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: Same Sex Marriage: ಸಲಿಂಗ ವಿವಾಹ ಕೇವಲ ನಗರ ಮೇಲ್ ಸ್ತರದ ದೃಷ್ಟಿಕೋನ ಎಂಬುದಕ್ಕೆ ಡೇಟಾಗಳಿಲ್ಲ; ಸುಪ್ರೀಂ

ಇಂದಿನ ವಾದ-ಪ್ರತಿವಾದವನ್ನು ಆಲಿಸಿದ ನಂತರ ಮುಖ್ಯ ನ್ಯಾಯಮುರ್ತಿ ಡಿ.ವೈ.ಚಂದ್ರಚೂಡ್ ಪ್ರತಿಕ್ರಿಯೆ ನೀಡಿ ‘ಸಲಿಂಗ ಜೋಡಿಗಳನ್ನು ಭಾರತಕ್ಕೆ ಎಲ್ಲಿಂದಲೂ ಆಮದು ಮಾಡಿಕೊಂಡಿಲ್ಲ. ಇದು ಇಲ್ಲಿನ ಸಮಾಜದಲ್ಲೇ ಇರುವ ಒಂದು ಸಂಗತಿ’ ಎಂದು ಹೇಳಿದ್ದಾರೆ. ಹಾಗೇ, ಸಲಿಂಗಿಗಳ ಮದುವೆಗೆ ಅವಕಾಶ ಇಲ್ಲವೆಂದ ಮೇಲೆ, ಅವರಿಗೆ ಸಾಮಾಜಿಕ ಭದ್ರತೆಯನ್ನು ಕಲ್ಪಿಸುವತ್ತ ಗಮನಹರಿಸಿ ಎಂದು ಹೇಳಿದ್ದಾರೆ. ಮುಂದಿನ ವಿಚಾರಣೆಯನ್ನು ಮೇ 9ಕ್ಕೆ ನಿಗದಿಪಡಿಸಿದ್ದಾರೆ.

Exit mobile version