Site icon Vistara News

Sameer Wankhede | ಹುಟ್ಟಿನಿಂದಲೇ ಮುಸ್ಲಿಮನಲ್ಲ; ಸಮೀರ್‌ ವಾಂಖೆಡೆಗೆ ಕ್ಲೀನ್‌ ಚಿಟ್‌

ಮುಂಬೈ: ಜಾತಿ ಕುರಿತು ನಕಲಿ ಪ್ರಮಾಣಪತ್ರ (Fake Caste Certificate) ಸಲ್ಲಿಸಿ ಸರ್ಕಾರಿ ಉದ್ಯೋಗ ಪಡೆದ ಪ್ರಕರಣದಲ್ಲಿ ಮಾದಕವಸ್ತು ನಿಯಂತ್ರಣ ಬ್ಯೂರೊ (ಎನ್‌ಸಿಬಿ)ಮಾಜಿ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ (Sameer Wankhede) ಅವರಿಗೆ ಮಹಾರಾಷ್ಟ್ರದ ಜಾತಿ ಪರಿಶೀಲನಾ ಸಮಿತಿಯು ಕ್ಲೀನ್‌ ಚಿಟ್ ನೀಡಿದೆ. ಅಲ್ಲದೆ, “ಸಮೀರ್‌ ವಾಂಖೆಡೆ ಅವರು ಹುಟ್ಟಿನಿಂದಲೇ ಮುಸ್ಲಿಮರಲ್ಲ” ಎಂದು ಸಮಿತಿ ಸ್ಪಷ್ಟಪಡಿಸಿದೆ.

ಸಮೀರ್‌ ವಾಂಖೆಡೆ ಕುರಿತು ಸಲ್ಲಿಕೆಯಾದ ದೂರುಗಳ ಕುರಿತು ವಿಚಾರಣೆ ನಡೆಸಿದ ಮುಂಬೈ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯು ವಾಂಖೆಡೆ ಅವರಿಗೆ ಕ್ಲೀನ್‌ಚಿಟ್‌ ನೀಡಿತು. ದೂರುಗಳಲ್ಲಿ ಉಲ್ಲೇಖಿಸಿದ ಅಂಶಗಳ ಕುರಿತು ಸರಿಯಾದ ದಾಖಲೆಗಳು ಇಲ್ಲ ಎಂದೂ ಸ್ಪಷ್ಟಪಡಿಸಿತು. “ಸಮೀರ್‌ ವಾಂಖೆಡೆ ಅವರು ಹುಟ್ಟಿನಿಂದಲೇ ಮುಸ್ಲಿಮರಲ್ಲ. ಅವರು ಹಿಂದೂ ಧರ್ಮವನ್ನು ತ್ಯಜಿಸಿ, ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ” ಎಂದು ತಿಳಿಸಿತು. ಸಮಿತಿಯ ತೀರ್ಪು ಹೊರಬೀಳುತ್ತಲೇ ಸಮೀರ್‌ ವಾಂಖೆಡೆ ಅವರು “ಸತ್ಯಮೇವ ಜಯತೆ” ಎಂದು ಟ್ವೀಟ್‌ ಮಾಡಿ ಸಂತಸ ವ್ಯಕ್ತಪಡಿಸಿದರು.

ಸಮೀರ್‌ ವಾಂಖೆಡೆ ಹಾಗೂ ಅವರ ತಂದೆಯು ಹಿಂದೂ ಧರ್ಮದ, ಪರಿಶಿಷ್ಟ ಜಾತಿಗೆ ಸೇರಿದ ಮಹಾರ್‌-೩೭ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದೆ. ಸಮೀರ್‌ ವಾಂಖೆಡೆ ಅವರು ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಸರಕಾರಿ ಉದ್ಯೋಗ ಪಡೆದಿದ್ದಾರೆ ಎಂದು ಮಹಾರಾಷ್ಟ್ರ ಮಾಜಿ ಸಚಿವ ನವಾಬ್‌ ಮಲಿಕ್‌ ಸೇರಿ ಹಲವರು ದೂರು ನೀಡಿದ್ದರು.

ಭಾರತೀಯ ಕಂದಾಯ ಸೇವೆ (ಐಆರ್‌ಎಸ್‌) ಅಧಿಕಾರಿಯಾಗಿರುವ ಸಮೀರ್‌ ವಾಂಖೆಡೆ ಅವರು ಕಳೆದ ವರ್ಷ ಮುಂಬೈನ ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿ, ಡ್ರಗ್ಸ್‌ ವಶಪಡಿಸಿಕೊಂಡ ಬಳಿಕ ದೇಶಾದ್ಯಂತ ಸುದ್ದಿಯಾಗಿದ್ದರು. ಇದೇ ಡ್ರಗ್ಸ್‌ ಪ್ರಕರಣದಲ್ಲಿ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ಗೆ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿದೆ.

ಇದನ್ನೂ ಓದಿ | ಕ್ರೂಸ್‌ನಲ್ಲಿ ಡ್ರಗ್ಸ್‌ ಕೇಸ್‌, ಶಾರುಖ್‌ ಪುತ್ರ ಆರ್ಯನ್‌ ಖಾನ್‌ಗೆ ಕ್ಲೀನ್‌ ಚಿಟ್‌

Exit mobile version