ಚಂಡಿಗಢ್: ಲೈಂಗಿಕ ದೌರ್ಜನ್ಯ ಆರೋಪ ಹೊತ್ತ ಹರಿಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್ ಇದೀಗ ತಮ್ಮ ಸಚಿವ ಸ್ಥಾನದಿಂದ ಕೆಳಗಿಳಿದಿದ್ದಾರೆ. ಸಂದೀಪ್ ಸಿಂಗ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದನ್ನು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಖಚಿತಪಡಿಸಿದ್ದಾರೆ. ಇನ್ನೊಂದೆಡೆ ಸಂದೀಪ್ ಸಿಂಗ್ ಅವರು ತಮ್ಮ ಮೇಲಿನ ಆರೋಪ ಸುಳ್ಳು. ನನ್ನ ವ್ಯಕ್ತಿತ್ವಕ್ಕೆ ಮಸಿಬಳಿಯುವ ಸಲುವಾಗಿ ಹೀಗೆಲ್ಲ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಸಂದೀಪ್ ಸಿಂಗ್ ವಿರುದ್ಧ ಜ್ಯೂನಿಯರ್ ಅಥ್ಲೆಟಿಕ್ಸ್ ಮಹಿಳಾ ಕೋಚ್ (ಮಹಿಳಾ ತರಬೇತಿದಾರರು)ವೊಬ್ಬರು ಪೊಲೀಸರಿಗೆ ದೂರು ನೀಡಿ, ‘ನಾನು ಕ್ರೀಡಾ ಸಚಿವರ ಚಂಡಿಗಢ್ನಲ್ಲಿರುವ ನಿವಾಸಕ್ಕೆ ಕಾರ್ಯ ನಿಮಿತ್ತ ಹೋಗಿದ್ದಾಗ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿದ್ದಾರೆ. ಅದರ ಆಧಾರದ ಮೇಲೆ ಚಂಡಿಗಢ ಪೊಲೀಸರು ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಕ್ರಿಮಿನಲ್ ಕೇಸ್ ದಾಖಲು ಮಾಡಿದ್ದಾರೆ.
ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂದೀಪ್ ಸಿಂಗ್ ‘ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ನಾನು ಆಗ್ರಹಿಸುತ್ತಿದ್ದೇನೆ. ದೂರುದಾರ ಮಹಿಳೆಯ ಜೀವನದ ಬಗ್ಗೆಯೂ ಕೂಲಂಕಷ ಪರಿಶೀಲನೆ ಆಗಬೇಕು. ತನಿಖೆಯ ಸಂಪೂರ್ಣ ವರದಿ ಬರುವವರೆಗೂ ನಾನು ನನ್ನ ಸಚಿವ ಸ್ಥಾನವನ್ನು ತೊರೆಯುತ್ತಿದ್ದೇನೆ. ಕ್ರೀಡಾ ಇಲಾಖೆಯನ್ನು ಮುಖ್ಯಮಂತ್ರಿಯವರಿಗೆ ಹಸ್ತಾಂತರ ಮಾಡುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
ಮಹಿಳಾ ಕೋಚ್ ಹೇಳಿದ್ದೇನು?
ಭಾರತೀಯ ಹಾಕಿ ತಂಡದ ಮಾಜಿ ನಾಯಕನೂ ಆಗಿದ್ದ ಸಂದೀಪ್ ಸಿಂಗ್ 2019ರಲ್ಲಿ ಬಿಜೆಪಿ ಸೇರಿ, ಪೆಹೋವಾ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಸಚಿವರಾಗಿದ್ದರು. ಈ ಮಹಿಳಾ ಕೋಚ್ ಇದೇ ವರ್ಷ ಸೆಪ್ಟೆಂಬರ್ನಲ್ಲಿ ಜ್ಯೂನಿಯರ್ ಮಹಿಳಾ ಅಥ್ಲೆಟಿಕ್ಸ್ ತರಬೇತಿದಾರರಾಗಿ ನೇಮಕವಾದವರು.
ಆಕೆ ಸಚಿವರ ಬಗ್ಗೆ ಆರೋಪ ಮಾಡಿ ‘ನಾನು ಮೊದಲು ಸಚಿವರನ್ನು ನೋಡಿದ್ದು ಜಿಮ್ನಲ್ಲಿ. ಬಳಿಕ ಸಂದೀಪ್ ಸಿಂಗ್ ಅವರು ಇನ್ಸ್ಟಾಗ್ರಾಂ ಮೂಲಕ ನನ್ನನ್ನು ಸಂಪರ್ಕಿಸಿದರು. ‘ನಿಮ್ಮ ರಾಷ್ಟ್ರೀಯ ಆಟಗಳ ಪ್ರಮಾಣಪತ್ರದ ವಿಷಯವಾಗಿ ಸ್ಪಷ್ಟತೆಯಿಲ್ಲ. ಹೀಗಾಗಿ ಒಮ್ಮೆ ಬಂದು ನನ್ನನ್ನು ಭೇಟಿಯಾಗಿ’ ಎಂದು ಮೆಸೇಜ್ ಮಾಡಿದರು. ನಾನು ಕೆಲವು ದಾಖಲೆಗಳೊಂದಿಗೆ ಚಂಡಿಗಢ್ನಲ್ಲಿರುವ ಅವರ ಅಧಿಕೃತ ನಿವಾಸಕ್ಕೆ ತೆರಳಿದೆ. ಆ ಮನೆಯ ಮೂಲೆಯೊಂದರಲ್ಲಿ ಇದ್ದ ಕ್ಯಾಬಿನ್ಗೆ ಸಂದೀಪ್ ಸಿಂಗ್ ನನ್ನನ್ನು ಕರೆದೊಯ್ದರು. ನನ್ನ ಕೈಯಲ್ಲಿದ್ದ ದಾಖಲೆಗಳನ್ನೆಲ್ಲ ಕಿತ್ತುಕೊಂಡು ಪಕ್ಕದ ಟೇಬಲ್ ಮೇಲಿಟ್ಟು, ಅವರ ಕೈಯನ್ನು ನನ್ನ ಪಾದಗಳ ಮೇಲಿಟ್ಟರು. ‘ನಿನ್ನನ್ನು ಮೊದಲ ಸಲ ನೋಡಿದಾಗಲೇ ತುಂಬ ಇಷ್ಟವಾಯ್ತು. ನೀನು ನನ್ನನ್ನು ಸಂತೋಷವಾಗಿಟ್ಟರೆ, ನಾನೂ ನಿನ್ನನ್ನು ತುಂಬ ಸಂತೋಷವಾಗಿ ಇಡುತ್ತೇನೆ’ ಎಂದು ಹೇಳಿದರು. ನನ್ನ ಕಾಲಿನ ಮೇಲಿದ್ದ ಅವರ ಕೈಯನ್ನು ನಾನು ಅಲ್ಲಿಂದ ಕಿತ್ತೆಸೆದೆ. ಆಗ ಅವರು ನನ್ನ ಟಿ ಶರ್ಟ್ ಹರಿದುಹಾಕಿದರು. ನಾನು ಅಳುತ್ತಿದ್ದೆ ಮತ್ತು ಸಹಾಯಕ್ಕಾಗಿ ಯಾಚಿಸಿದೆ. ಅಲ್ಲಿ ಸಂದೀಪ್ ಸಿಂಗ್ ಅವರ ಸಹಾಯಕರು, ಸಿಬ್ಬಂದಿ ವರ್ಗ ಎಲ್ಲ ಇದ್ದರು. ಆದರೆ ಒಬ್ಬರೂ ನನ್ನ ಸಹಾಯಕ್ಕೆ ಬರಲಿಲ್ಲ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದಾರೆ.
ಇದನ್ನೂ ಓದಿ: ಹರಿಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲು; ಮಹಿಳಾ ಕೋಚ್ರಿಂದ ದೂರು