Site icon Vistara News

ಆಪ್‌ಗೆ ಮುಖಭಂಗ; ಭಗವಂತ್‌ ಮಾನ್‌ ಸಂಸದರಾಗಿದ್ದ ಕ್ಷೇತ್ರದಲ್ಲಿ ಎಸ್‌ಎಡಿ-ಎ ಅಭ್ಯರ್ಥಿಗೆ ಗೆಲುವು

Punjab Bypolls

ನವ ದೆಹಲಿ: ಪಂಜಾಬ್‌ನ ಸುಂಗ್ರೂರ್‌ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ (Sangrur Bypoll Results) ಶಿರೋಮಣಿ ಅಕಾಲಿ ದಳ್‌-ಅಮೃತ್‌ಸರ್‌ (SAD-A) ಪಕ್ಷದ ಅಭ್ಯರ್ಥಿ ಸಿಮ್ರಂಜಿತ್ ಸಿಂಗ್ ಮಾನ್ ಗೆದ್ದಿದ್ದಾರೆ. ಇವರು ಸಮೀಪದ ಪ್ರತಿಸ್ಪರ್ಧಿ ಆಮ್‌ ಆದ್ಮಿ ಪಕ್ಷದ ಗುರ್ಮೇಲ್‌ ಸಿಂಗ್‌ಕ್ಕಿಂತ 6800ಮತಗಳನ್ನು ಹೆಚ್ಚಾಗಿ ಪಡೆದು ವಿಜಯದ ನಗೆ ಬೀರಿದ್ದಾರೆ. ಇದು ಆಪ್‌ ಪಾಲಿಗೆ ಬಹುದೊಡ್ಡ ಮುಖಭಂಗ. ಯಾಕೆಂದರೆ ಪಂಜಾಬ್‌ ಈಗಿನ ಮುಖ್ಯಮಂತ್ರಿ ಭಗವಂತ್‌ ಮಾನ್‌ ಸಂಸದರಾಗಿದ್ದ ಕ್ಷೇತ್ರ ಇದು. ಈ ಸಲ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದಿದ್ದರಿಂದ ಸುಂಗ್ರೂರ್‌ನಲ್ಲಿ ಉಪಚುನಾವಣೆ ನಡೆದಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿದ ಆಪ್‌ಗೆ ಈ ಉಪಚುನಾವಣೆಯಲ್ಲಿ ಎಸ್‌ಎಡಿ-ಎ ಶಾಕ್‌ ಕೊಟ್ಟಿದೆ.

ಈ ಲೋಕಸಭಾ ಕ್ಷೇತ್ರ ಆಮ್‌ ಆದ್ಮಿ ಪಕ್ಷದ ಕೈಯಲ್ಲೇ ಇದ್ದಿದ್ದರಿಂದ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಮತಗಳಿಂದ ಅಧಿಕಾರಕ್ಕೆ ಏರಿದ್ದರಿಂದ ಆಮ್‌ ಆದ್ಮಿ ಪಕ್ಷಕ್ಕೆ ಉಪಚುನಾವಣೆಯಲ್ಲೂ ತಾವೇ ಗೆಲ್ಲುವ ಭರವಸೆ ಜಾಸ್ತಿಯೇ ಇತ್ತು. ಆದರೆ ಮತದಾರರು ಉಲ್ಟಾ ಹೊಡೆದಿದ್ದಾರೆ. ಗಾಯಕ ಸಿಧು ಸಿಂಗ್‌ ಮೂಸೇವಾಲಾ ಹತ್ಯೆಯ ಬಳಿ ಸಿಖ್‌ ಬಲಪಂಥೀಯ ನಾಯಕರು, ಬೆಂಬಲಿಗರು ಆಪ್‌ ಸಹವಾಸ ಬಿಟ್ಟಿದ್ದಾರೆ. ಇದೇ ಲೋಕಸಭಾ ಉಪಚುನಾವಣೆಯಲ್ಲಿ ದೊಡ್ಡ ಹೊಡೆತ ಕೊಟ್ಟಿದೆ ಎಂದು ಹೇಳಲಾಗುತ್ತಿದೆ.

ಸುಂಗ್ರೂರ್‌ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬರ್ನಾಲಾದ ಮಾಜಿ ಶಾಸಕ ಕೇವಾಲ್‌ ದಿಲ್ಲಾನ್‌ರನ್ನು ಕಣಕ್ಕೆ ಇಳಿಸಿತ್ತು. ಅವರು ಜೂ.೪ ರಂದು ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಶಿರೋಮಣಿ ಅಕಾಲಿ ದಳದಿಂದ ಕಮಲದೀಪ್‌ ಕೌರ್‌ ಸ್ಪರ್ಧಿಸಿದ್ದರು. ಹಾಗೇ, ಧುರಿಯ ಮಾಜಿ ಶಾಸಕ ದಲ್ವೀರ್‌ ಸಿಂಗ್‌ ಗೋಲ್ಡಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು.

ಇದನ್ನೂ ಓದಿ: 424 ಗಣ್ಯರ ಭದ್ರತೆ ಹಿಂತೆಗೆತ ನಿರ್ಧಾರ ಕೈಬಿಟ್ಟ ಪಂಜಾಬ್‌ ಸರ್ಕಾರ; ಜೂ.7ರಿಂದ ಮತ್ತೆ ಸೆಕ್ಯೂರಿಟಿ

Exit mobile version