Site icon Vistara News

Sania Mirza | ಭಾರತದ ಮೊದಲ ಮುಸ್ಲಿಂ ಮಹಿಳಾ ಫೈಟರ್​ ಪೈಲೆಟ್​ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಾನಿಯಾ ಮಿರ್ಜಾ

Sania Mirza 1st Muslim woman fighter pilot of India

ಮಿರ್ಜಾಪುರ: ಸಾನಿಯಾ ಮಿರ್ಜಾ ಅವರು ಭಾರತೀಯ ವಾಯಪಡೆಗೆ ಫೈಟರ್ ಪೈಲೆಟ್​ ಆಗಿ ಆಯ್ಕೆಯಾಗಿದ್ದು, ಈ ಮೂಲಕ ಭಾರತದ ಮೊದಲ ಮುಸ್ಲಿಂ ಮಹಿಳಾ ಫೈಟರ್ ಪೈಲೆಟ್​ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಹಾಗೇ, ವಾಯುಸೇನೆಯಲ್ಲಿ ಫೈಟರ್​ ಪೈಲೆಟ್​ ಆಗಿ ಸ್ಥಾನ ಪಡೆದ ಉತ್ತರ ಪ್ರದೇಶದ ಮೊದಲ ಮಹಿಳೆ ಎಂಬ ಖ್ಯಾತಿಯೂ ಇವರಿಗೆ ಸಲ್ಲುತ್ತದೆ.

ಸಾನಿಯಾ ಮಿರ್ಜಾ ಎಂದಾಕ್ಷಣ ಎಲ್ಲರ ತಲೆಗೆ ಮೊದಲು ಬರುವುದು ಖ್ಯಾತ ಟೆನ್ನಿಸ್​ ಆಟಗಾರ್ತಿ. ಆದರೆ ಈ ಸಾನಿಯಾ ಮಿರ್ಜಾ ಬೇರೆ. ಇವರು ಉತ್ತರ ಪ್ರದೇಶದ ಮಿರ್ಜಾಪುರ್ ದೇಹತ್​​ನ ಜಸೋವರ್ ಎಂಬ ಗ್ರಾಮದವರು. ಟಿವಿ ಮೆಕ್ಯಾನಿಕ್​ ಶಾಹೀದ್ ಅಲಿ ಮತ್ತು ತಬ್ಸುಮ್​ ಮಿರ್ಜಾ ದಂಪತಿಯ ಹೆಮ್ಮೆಯ ಪುತ್ರಿ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA-ನ್ಯಾಶನಲ್​ ಡಿಫೆನ್ಸ್​ ಅಕಾಡೆಮಿ) ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಇವರು ಡಿ.27ರಿಂದ ಪುಣೆಯಲ್ಲಿರುವ ಖಡಕ್ವಾಸ್ಲಾ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ತಮ್ಮ ಕರ್ತವ್ಯ ಆರಂಭಿಸಲಿದ್ದಾರೆ. ಸಾನಿಯಾ ಮಿರ್ಜಾ ಸಾಧನೆ ಈಗ ಪಾಲಕರಲ್ಲಿ ಅಷ್ಟೇ ಅಲ್ಲ, ಆಕೆಯ ಇಡೀ ಹಳ್ಳಿ, ರಾಜ್ಯಕ್ಕೂ ಹೆಮ್ಮೆ ತಂದಿದೆ.

ಮಗಳು ಸಾನಿಯಾ ಮಿರ್ಜಾ ಬಗ್ಗೆ ಮಾತನಾಡಿದ ತಂದೆ ಶಾಹೀದ್​ ಅಲಿ, ‘ನನ್ನ ಮಗಳ ಸಾಧನೆ ಖುಷಿ ತಂದಿದೆ. ದೇಶದ ಮೊದಲ ಮಹಿಳಾ ಫೈಟರ್​ ಪೈಲೆಟ್​ ಅವನಿ ಚತುರ್ವೇದಿ ಅವರೇ ನನ್ನ ಮಗಳಿಗೆ ಸ್ಫೂರ್ತಿ. ದೇಶದ ಎರಡನೇ ಫೈಟರ್​ ಪೈಲೆಟ್ ಆಗಿ ನನ್ನ ಮಗಳು ಸಾನಿಯಾ ಆಯ್ಕೆಯಾಗಿದ್ದಾಳೆ’ ಎಂದು ಹೇಳಿದ್ದಾರೆ. ‘ನನ್ನ ಮಗಳು ಪಾಲಕರಾದ ನಮಗೆ ಮತ್ತು ಇಡೀ ಹಳ್ಳಿಗೇ ಗೌರವ ತಂದಿದ್ದಾಳೆ. ಹೆಣ್ಣುಮಕ್ಕಳು ತಮ್ಮ ಕನಸನ್ನು ಪೂರೈಸಿಕೊಳ್ಳಬೇಕು. ಈ ವಿಚಾರದಲ್ಲಿ ನನ್ನ ಮಗಳು ಮಾದರಿಯಾಗಿ ನಿಲ್ಲುತ್ತಾಳೆ’ ಎಂದು ಸಾನಿಯಾ ತಾಯಿ ತಬ್ಸುಮ್​ ಮಿರ್ಜಾ ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲ ಪ್ರಯತ್ನದಲ್ಲಿ ಸೋತಿದ್ದರು ಸಾನಿಯಾ
ಸಾನಿಯಾ ಮಿರ್ಜಾ 10 ತರಗತಿಯವರೆಗೆ ತನ್ನದೇ ಹಳ್ಳಿಯಲ್ಲಿರುವ ಪಂಡಿತ್​ ಚಿಂತಾಮಣಿ ದುಬೆ ಇಂಟರ್ ಕಾಲೇಜಿನಲ್ಲಿ ಓದಿದರು. ನಂತರ ನಗರಕ್ಕೆ ಕಾಲಿಟ್ಟು, ಗುರುನಾನಕ್​ ಹೆಣ್ಣುಮಕ್ಕಳ ಅಂತರ್​ ಕಾಲೇಜಿನಲ್ಲಿ ಅಧ್ಯಯನ ಮುಂದುವರಿಸಿದರು. 12ನೇ ತರಗತಿಯಲ್ಲಿ ಮಿರ್ಜಾಪುರ್ ದೇಹತ್ ಜಿಲ್ಲೆಗೇ ಟಾಪರ್ ಆದರು. ಅಲ್ಲಿಂದ ಸೆಂಚುರಿಯನ್​ ಡಿಫೆನ್ಸ್ ಅಕಾಡೆಮಿಗೆ ಸೇರಿ ತರಬೇತಿ ಪಡೆದು, ಎನ್​ಡಿಎ ಪರೀಕ್ಷೆ ಬರೆದರು. ‘2022ರ ನ್ಯಾಶನಲ್ ಡಿಫೆನ್ಸ್​ ಅಕಾಡೆಮಿ ಪರೀಕ್ಷೆಯಲ್ಲಿ, ಫೈಟರ್​ ಪೈಲೆಟ್​ ಸ್ಥಾನಕ್ಕೆ ಮಹಿಳೆಯರಿಗಾಗಿ ಎರಡು ಸೀಟ್​​ಗಳನ್ನು ಕಾಯ್ದಿರಿಸಲಾಗಿತ್ತು. ನಾನು ನನ್ನ ಮೊದಲ ಪ್ರಯತ್ನದಲ್ಲಿ ಸೀಟ್​ ಪಡೆಯಲು ಸಾಧ್ಯವಾಗಲಿಲ್ಲ. ಎರಡನೇ ಪ್ರಯತ್ನದಲ್ಲಿ ನನ್ನ ಕನಸು ಈಡೇರಿತು’ ಎನ್ನುತ್ತಾರೆ ಸಾನಿಯಾ ಮಿರ್ಜಾ.

ಇದನ್ನೂ ಓದಿ: HUD Display | ಹೊಸ ಕಾರುಗಳಲ್ಲಿರುವ ಎಚ್​ಯುಡಿ ಡಿಸ್​ಪ್ಲೆ ಎಂದರೇನು? ಇಲ್ಲಿದೆ ವಿವರಣೆ

Exit mobile version