ಕೇರಳದಲ್ಲಿ ಇತ್ತೀಚೆಗಷ್ಟೇ ರಸ್ತೆ ಅಪಘಾತದಲ್ಲಿ ಮೃತಪಟ್ಟು, ಸಾವಿನ ಬಳಿಕ ಅಂಗಾಂಗ ದಾನ (Organ Donation) ಮಾಡಿದ್ದ 16ವರ್ಷದ ಹುಡುಗ ಸಾರಂಗ್ ಅವರ ಎಸ್‌ಎಸ್‌ಎಲ್‌ಸಿ ಫಲಿತಾಂಶ (Kerala SSLC Boy) ಹೊರಬಿದ್ದಿದ್ದು, ಎಲ್ಲ ವಿಷಯಗಳಲ್ಲೂ ಆತ ಎ ಪ್ಲಸ್ ಪಡೆದಿದ್ದಾನೆ. ಈ ಮೃತ ವಿದ್ಯಾರ್ಥಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಕೇರಳದ ಸಾಮಾನ್ಯ ಶಿಕ್ಷಣ ಸಚಿವ ವಿ.ಶಿವಕುಟ್ಟಿ ಅವರು ಶುಕ್ರವಾರ ಕಣ್ಣೀರು ಹಾಕುತ್ತ ಪ್ರಕಟಿಸಿದ್ದಾರೆ.
ಸಾರಂಗ್ ಚೆನ್ನಾಗಿ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ. ಆದರೆ ರಿಸಲ್ಟ್ ಬರುವುದಕ್ಕೂ ಮುನ್ನ ಜೀವನ ಮುಗಿಸಿದ್ದ. ಅಂದಹಾಗೇ ಇವನು ಅತ್ತಿಂಗಲ್ ಹುಡುಗರ ಶಾಲೆಯಲ್ಲಿ ಓದುತ್ತಿದ್ದು, ಪ್ರತಿಭಾವಂತ ಎನ್ನಿಸಿಕೊಂಡಿದ್ದ. ಮೇ 6ರಂದು ಅಮ್ಮನೊಂದಿಗೆ ತೊಟ್ಟಕಾಡ್ ವಡಕೊಟ್ಟುಕಾವುನಲ್ಲಿರುವ ಕುನ್ನತುಕೋಣಂ ಬಳಿ ಆಟೋರಿಕ್ಷಾದಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿತ್ತು. ಆಟೋ ರಿಕ್ಷಾ ಉರುಳಿಬಿದ್ದಿತ್ತು. ಅದರಲ್ಲಿದ್ದವರಲ್ಲಿ ಸಾರಂಗ್ ಹೆಚ್ಚು ಗಾಯಗೊಂಡಿದ್ದ. ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು. ಆದರೆ ಮಿದುಳು ನಿಷ್ಕ್ರಿಯಗೊಂಡಿತ್ತು. ಕುಟುಂಬದವರು ಒಪ್ಪಿ ಅವನ ಅಂಗಾಂಗ ದಾನ ಮಾಡಿದ್ದರು. ಆರು ಮಂದಿಗೆ ಅವನು ಜೀವ ಕೊಟ್ಟಿದ್ದ.
ಇದನ್ನೂ ಓದಿ: SSLC Result: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ; ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ
ಶುಕ್ರವಾರ ಸಾರಂಗ್ನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಹೇಳುವಾಗ ಸಚಿವರು ಕಣ್ಣಲ್ಲಿ ನೀರು ಹಾಕಿದ್ದಾರೆ. ತುಂಬ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ‘ಸಾರಂಗ್ ಅತ್ಯುತ್ತಮ ಫೂಟ್ಬಾಲ್ ಆಟಗಾರನೂ ಆಗಿದ್ದ. ಅವನು ರಿಕ್ಷಾದಲ್ಲಿ ಹೋಗುತ್ತಿದ್ದಾಗ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಜೀವ ಹೋದ ಮೇಲೆ ಕೂಡ ಅದ್ಭುತ ಕೆಲಸ ಮಾಡಿದ್ದಾನೆ. ಅವನು 6 ಮಂದಿಗೆ ಅಂಗಾಂಗ ದಾನ ಮಾಡಿದ್ದಾನೆ. ಇಂಥದ್ದೊಂದು ನಿರ್ಧಾರ ತೆಗೆದುಕೊಂಡ ಬಾಲಕನ ಕುಟುಂಬಕ್ಕೆ ನನ್ನ ಧನ್ಯವಾದ, ಮೆಚ್ಚುಗೆ ಸೂಚಿಸುತ್ತೇನೆ’ ಎಂದಿದ್ದಾರೆ.
ಸಾರಂಗ್ನ ಹುಟ್ಟೂರು ನಿಕುಂಜಮ್. ಅಪಘಾತದಲ್ಲಿ ಗಾಯಗೊಂಡು, ಮಿದುಳು ನಿಷ್ಕ್ರಿಯಗೊಂಡಿದ್ದ ಅವನನ್ನು ಮೇ 6ರಂದು ಮೃತ ಎಂದು ಘೋಷಿಸಲಾಯಿತು. ಅಪ್ಪ-ಅಮ್ಮನ ಒಪ್ಪಿಗೆ ಮೇರೆಗೆ ಯಾವೆಲ್ಲ ಅಂಗ ದಾನ ಮಾಡಲು ಸಾಧ್ಯವಾಗುತ್ತಿತ್ತೋ, ಅದನ್ನೆಲ್ಲ ದಾನ ಮಾಡಲಾಯಿತು. ಈತನ ಪುಟ್ಟ ಹೃದಯ, ಕೊಟ್ಟಾಯಂನ ಒಂದು ಪುಟ್ಟ ಮಗುವಿನ ದೇಹವನ್ನು ಸೇರಿದೆ. ಫುಟ್ಬಾಲ್ನಲ್ಲಿ ಪಳಗಿದ್ದ ಈತ ಅದರ ಕೋಚಿಂಗ್ ಕೂಡ ಪಡೆಯುತ್ತಿದ್ದ. ಕಣ್ಣಲ್ಲಿ ನೂರು ಕನಸಿದ್ದು, ಅದರ ಸಾಕಾರಕ್ಕೆ ಅಗತ್ಯ ಪ್ರತಿಭೆಯಿದ್ದರೂ ವಿಧಿ ಎದುರು ಸೋತಿದ್ದ ಈ ಹುಡುಗ.