ನವ ದೆಹಲಿ: ಸ್ವಾತಂತ್ರ್ಯ ಬಂದು 75 ವರ್ಷಗಳಾದ ಸಂಭ್ರಮದ ಭಾಗವಾಗಿ ಇಂದು ಇಸ್ರೋ ಅತಿ ಸಣ್ಣ ವಾಣಿಜ್ಯ ರಾಕೆಟ್ ಎಸ್ಎಸ್ಎಲ್ವಿ ಡಿ 1 ಮೂಲಕ AzaadiSAT ಎಂಬ ಉಪಗ್ರಹವನ್ನು ಉಡಾವಣೆ ಮಾಡಿತ್ತು. ಶ್ರೀಹರಿಕೋಟಾದಿಂದ ಮುಂಜಾನೆ 9.18ಕ್ಕೆ ನಭಕ್ಕೆ ಚಿಮ್ಮಿದ್ದ ಈ ರಾಕೆಟ್ ಮೂರು ಹಂತಗಳನ್ನು ಯಶಸ್ವಿಯಾಗಿ ದಾಟಿ, ನಾಲ್ಕನೇ ಹಂತದಲ್ಲಿ ಡೇಟಾ ಲಾಸ್ನಿಂದ ವಿಫಲಗೊಂಡಿದೆ. ಅದರ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO), ‘ಸಣ್ಣ ಉಪಗ್ರಹ ಉಡಾವಣಾ ವಾಹಕದಲ್ಲಿ ಇರಿಸಲಾಗಿದ್ದ ಉಪಗ್ರಹಗಳು ಇನ್ನು ಯಾವುದಕ್ಕೂ ಬಳಕೆಗೆ ಬರುವುದಿಲ್ಲ. ಯಾಕೆಂದರೆ ಎಸ್ಎಸ್ಎಲ್ವಿ-ಡಿ1 ವಾಹಕ ಅವುಗಳನ್ನು ವೃತ್ತಾಕಾರಾದ ಕಕ್ಷೆಯಲ್ಲಿ ಇಡುವ ಬದಲು, ದೀರ್ಘವೃತ್ತಾಕಾರ(ಅಂಡಾಕಾರ)ದ ಕಕ್ಷೆಯಲ್ಲಿ ಇರಿಸಿದೆ’ ಎಂದು ತಿಳಿಸಿದೆ.
ದೇಶದ ೭೫ ಗ್ರಾಮೀಣ ಸರ್ಕಾರಿ ಶಾಲೆಗಳ ೭೫೦ ವಿದ್ಯಾರ್ಥಿನಿಯರು ತಯಾರಿಸಿದ 75 ಪೇಲೋಡ್‌ಗಳನ್ನು ಹೊತ್ತಿರುವ ಉಪಗ್ರಹ ಇದಾಗಿದ್ದು, AzaadiSAT ಎಂದು ನಾಮಕರಣ ಮಾಡಲಾಗಿತ್ತು . ಒಂದೊಂದು ಪೇಲೋಡ್‌ಗಳ ತೂಕ ೫೦ ಗ್ರಾಂ ಮಾತ್ರ ಇತ್ತು. ಈ ಪೇಲೋಡ್‌ಗಳಲ್ಲಿ ದೂರಗಾಮಿ ಟ್ರಾನ್ಸ್‌ಪಾಂಡರ್‌ಗಳು ಮತ್ತು ಸೆಲ್ಫಿ ಕ್ಯಾಮರಾಗಳನ್ನೂ ಅಳವಡಿಸಲಾಗಿತ್ತು. ಒಮ್ಮೆ ಇವು ನಿಗದಿತ ಕಕ್ಷೆಗೆ ಹೋಗಿದ್ದರೆ, ಅಲ್ಲಿಂದ ಬಂದ ಸಂದೇಶವನ್ನು ಸ್ವೀಕರಿಸಿ, ನಿಭಾಯಿಸುವ ಕೆಲಸವನ್ನು ಸ್ಪೇಸ್ ಕಿಡ್ಸ್ ಇಂಡಿಯಾದ ವಿದ್ಯಾರ್ಥಿ ತಂಡಗಳು ನಿರ್ವಹಿಸಲಿದ್ದವು. ಹಾಗೇ, ಈ ಆಜಾದಿಸ್ಯಾಟ್ನೊಂದಿಗೆ ಇಒಎಸ್-೨ ಎಂಬ ಭೂ ಸರ್ವೇಕ್ಷಣಾ ಉಪಗ್ರಹ ಕೂಡ ನಭಕ್ಕೆ ಹಾರಿತ್ತು. ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣಾ ಕಾರ್ಯಗಳಿಗೆ ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿತ್ತು. ಆದರೆ ಡೇಟಾ ಲಾಸ್ನಿಂದಾಗಿ ಇವು ಯಾವವೂ ನಿಗದಿತ ಕಕ್ಷೆ ಸೇರ್ಪಡೆಗೊಂಡಿಲ್ಲ.
ಇದನ್ನೂ ಓದಿ: Azaadi Sat| ಮೂರು ಹಂತ ಯಶಸ್ವಿ, ಕೊನೆಯ ಸ್ಟೇಜ್‌ನಲ್ಲಿ ಡೇಟಾ ಲಾಸ್ ಅನುಭವಿಸಿದ SSLV