ನವ ದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ತಿಹಾರ್ ಜೈಲು ಸೇರಿರುವ ದೆಹಲಿ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ (Satyendar Jain) ಅವರಿಗೆ ಸುಪ್ರೀಂಕೋರ್ಟ್ (Supreme Court) ಆರು ವಾರಗಳ ಮಧ್ಯಂತರ ಜಾಮೀನು ನೀಡಿದೆ. ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಈ ಜಾಮೀನು ಮಂಜೂರು ಮಾಡಿದೆ. 2022ರ ಮೇ ತಿಂಗಳಿಂದಲೂ ತಿಹಾರ್ ಜೈಲಿನಲ್ಲಿ ಇರುವ ಸತ್ಯೇಂದ್ರ ಜೈನ್ ಜಾಮೀನು ಅವರಧಿ ಜುಲೈ 11ರವರೆಗೆ ಇರಲಿದೆ. ‘ಯಾವುದೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ಪುರಾವೆಗಳನ್ನು ನಾಶ ಮಾಡಬಾರದು, ತಿರುಚಬಾರದು. ದೆಹಲಿಯನ್ನು ಬಿಟ್ಟು ಬೇರೆಲ್ಲೂ ಹೋಗಬಾರದು’ ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿರುವ ಸುಪ್ರೀಂಕೋರ್ಟ್, ಜುಲೈ 10ರಂದು ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಹಾಗೇ, ಹೊಸದಾದ ವೈದ್ಯಕೀಯ ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದೆ.
ಸತ್ಯೇಂದ್ರ ಜೈನ್ ಅವರು ಮೇ 25ರಂದು ಮುಂಜಾನೆ 6ಗಂಟೆ ಹೊತ್ತಿಗೆ, ತಿಹಾರ್ ಜೈಲಿನ ತಾವಿದ್ದ ಕೋಣೆಯ ಬಾತ್ರೂಮಿನಲ್ಲಿ ತಲೆಸುತ್ತಿ ಬಿದ್ದಿದ್ದಾರೆ. ಎಚ್ಚರ ತಪ್ಪಿದ್ದ ಅವರನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಉಸಿರಾಟದಲ್ಲಿ ತೀವ್ರ ಏರುಪೇರಾಗಿದ್ದರಿಂದ ಬಳಿಕ ಲೋಕ ನಾಯಕ್ ಜೈ ಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಯಿತು. ಎಚ್ಚರವಾದಾಗ ಅವರಿಗೆ ಬೆನ್ನು, ಎಡಗಾಲು, ಎಡಗೈಯ್ಯಲ್ಲೆಲ್ಲ ವಿಪರೀತ ನೋವು ಇತ್ತು. ಆರೋಗ್ಯ ಕ್ಷೀಣವಾಯಿತು. ಹೀಗಾಗಿ ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಅದರ ಬೆನ್ನಲ್ಲೇ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಅಂದಹಾಗೇ ಇದಕ್ಕೂ ಮೊದಲು ಅವರಲ್ಲಿ ಹಲವು ಬಾರಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು.
ಇದನ್ನೂ ಓದಿ: Satyendra Jain | ಜೈಲಲ್ಲಿ ಮಸಾಜ್ ಬೆನ್ನಲ್ಲೇ ವಜಾಗೊಂಡ ಜೈಲಧಿಕಾರಿ ಜತೆ ಸತ್ಯೇಂದ್ರ ಜೈನ್ ಮಾತು, ಹೊಸ ವಿಡಿಯೊ ವೈರಲ್
ಸತ್ಯೇಂದ್ರ ಜೈನ್ ವಿರುದ್ಧ 2017ರಲ್ಲಿ ಸಿಬಿಐ ಅಕ್ರಮ ಹಣ ವರ್ಗಾವಣೆ ಕೇಸ್ ದಾಖಲಿಸಿ, ತನಿಖೆ ಕೈಗೊಂಡಿತ್ತು. ಬಳಿ ಜಾರಿ ನಿರ್ದೇಶನಾಲಯ (ಇ.ಡಿ.)ಕೂಡ ಪ್ರಕರಣ ದಾಖಲಿಸಿದೆ. 2022ರ ಏಪ್ರಿಲ್ ತಿಂಗಳಲ್ಲಿ ಸತ್ಯೇಂದ್ರ ಜೈನ್ಗೆ ಸೇರಿದ ಮನೆ, ಕಚೇರಿಗಳ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಅವರಿಗೆ ಸೇರಿದ 4.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿತ್ತು. 2015-2016ರ ವೇಳೆಯಲ್ಲಿ ಸತ್ಯೇಂದ್ರ ಜೈನ್ ಅವರು ಸಚಿವರಾಗಿದ್ದಾಗ ತಮ್ಮ ಹುದ್ದೆ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಮಾಡಿದ್ದಾರೆ ಎಂದು ತನಿಖಾದಳಗಳು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿವೆ.