ಎರ್ನಾಕುಲಂ: ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ. ಅವರು ಕ್ಷಮೆ ಕೋರಿ ಬ್ರಿಟಿಷರಿಗೆ ಪತ್ರ ಬರೆದಿದ್ದರು, ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡೇ ಇಲ್ಲ ಎಂದೇ ವಾದಿಸುತ್ತ ಬಂದಿರುವ ಕಾಂಗ್ರೆಸ್ ಈಗ ವೀರ ಸಾವರ್ಕರ್ ಅವರೂ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದು ಒಪ್ಪಿಕೊಂಡೇಬಿಟ್ಟಿತಾ?.. ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಕೇರಳದ ಎರ್ನಾಕುಲಂ ಜಿಲ್ಲೆ ತಲುಪಿದ್ದು, ಅಲ್ಲಿನ ಏರ್ಪೋರ್ಟ್ ಬಳಿ ಹಾಕಿರುವ ಉದ್ದನೆಯ ಪೋಸ್ಟರ್ ನಲ್ಲಿ ಇತರ ಸ್ವಾತಂತ್ರ್ಯ ಹೋರಾಟಗಾರರ ಫೋಟೋದೊಟ್ಟಿಗೆ ವೀರ ಸಾವರ್ಕರ್ ಫೋಟೋ ಕೂಡ ಇದೆ. ಈ ಪೋಸ್ಟರ್ ಅಚ್ಚರಿಗೆ ಕಾರಣವಾಗಿದೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ಸ್ವಾಗತಿಸುವ ಸಲುವಾಗಿ ಎರ್ನಾಕುಲಂನ ಅಲುವಾ ಎಂಬಲ್ಲಿ ದೊಡ್ಡದಾದ ಪೋಸ್ಟರ್ ಹಾಕಲಾಗಿದೆ. ಅದರಲ್ಲಿ ಚಂದ್ರಶೇಖರ್ ಆಜಾದ್ ಸೇರಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಫೋಟೋ ಇದೆ. ಹೀಗೆ ಫೋಟೋಗಳ ಸಾಲಿನಲ್ಲಿ ವೀರ ಸಾವರ್ಕರ್ ಭಾವಚಿತ್ರವೂ ಇದೆ. ಈ ಪೋಸ್ಟರ್ ಗಮನಿಸಿ ಅದರ ಫೋಟೋವನ್ನು ಮೊದಲು ತಮ್ಮ ಫೇಸ್ಬುಕ್ನಲ್ಲಿ ಹಾಕಿಕೊಂಡವರು ಸ್ವತಂತ್ರ ಶಾಸಕ ಪಿ.ವಿ. ಅನ್ವರ್. ‘ಅಲುವಾದಲ್ಲಿ ಹಾಕಿರುವ ಪೋಸ್ಟರ್ನಲ್ಲಿ ವೀರ ಸಾವರ್ಕರ್ ಫೋಟೋ ಇರುವ ಬಗ್ಗೆ ನಾವು ಹೇಳಿದಾಗ, ಅದು ಬಿಜೆಪಿಯ ಪೋಸ್ಟರ್. ಕರ್ನಾಟಕದಲ್ಲಿ ಸ್ವಾತಂತ್ರ್ಯ ದಿನಾಚರಣೆ ದಿನ ಹಾಕಿದ್ದು ಎಂಬ ವಿವರಣೆಯನ್ನು ನಮಗೆ ಕೊಟ್ಟರು. ಆದರೆ ಇದು ಕರ್ನಾಟಕದ್ದಲ್ಲ. ಕೇರಳದ್ದೇ ಪೋಸ್ಟರ್. ಈ ಬಗ್ಗೆ ಕಾಂಗ್ರೆಸ್ ಗಮನಕ್ಕೆ ಬರುತ್ತಿದ್ದಂತೆ ಸಾವರ್ಕರ್ ಫೋಟೋ ಇದ್ದಲ್ಲಿ, ಮಹಾತ್ಮ ಗಾಂಧಿ ಫೋಟೋ ಹಾಕಿ, ತನ್ನ ತಪ್ಪು ಮುಚ್ಚಿಕೊಂಡಿತು’ ಎಂದು ಅನ್ವರ್ ಬರೆದುಕೊಂಡಿದ್ದಾರೆ.
ಬಿಜೆಪಿ ಪ್ರತಿಕ್ರಿಯೆ
ಕಾಂಗ್ರೆಸ್ ಪೋಸ್ಟರ್ನಲ್ಲಿ ವೀರ ಸಾವರ್ಕರ್ ಫೋಟೋ ನೋಡುತ್ತಿದ್ದಂತೆ ಬಿಜೆಪಿ ಐಟಿ ಘಟಕ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿ ‘ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯಲ್ಲಿ ಸಾವರ್ಕರ್ ಫೋಟೋ ಇರುವ ಪೋಸ್ಟರ್ ಹಾಕಲಾಗಿದೆ. ಅವರೂ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂಬುದು ರಾಹುಲ್ ಗಾಂಧಿಗೆ ತಡವಾಗಿಯಾದರೂ ಅರ್ಥವಾಯಿತು. ಬ್ರಿಟಿಷರ ಎದುರು ಕ್ಷಮೆ ಕೇಳಿದ್ದು, ಪಂಜಾಬ್ನ ನಭಾ ಜೈಲಿನಿಂದ ಓಡಿಹೋಗಲು ಅವಕಾಶ ಮಾಡಿಕೊಂಡುವಂತೆ ಅವರ ಬಳಿ ಮನವಿ ಮಾಡಿದ್ದು ತನ್ನ ಮುತ್ತಜ್ಜ ಎಂಬುದು ರಾಹುಲ್ ಗಾಂಧಿಗೆ ಗೊತ್ತಾದಂತಿದೆ’ ಎಂದಿದ್ದಾರೆ.
ಪ್ರಿಂಟ್ ಮಿಸ್ಟೇಕ್
ಇಷ್ಟಾದರೂ ಕಾಂಗ್ರೆಸ್ ಮಾತ್ರ ಇದು ಪ್ರಿಂಟ್ ಮಿಸ್ಟೇಕ್ನಿಂದ ಆಗಿದ್ದು ಎಂದೇ ಹೇಳಿದೆ. ಪೋಸ್ಟರ್ಗಳನ್ನು ಮುದ್ರಣ ಮಾಡುವಾಗ ಎಲ್ಲ ನಾಯಕರ ಪೋಟೋಗಳನ್ನೂ ಮುದ್ರಕರು ಒಟ್ಟಿಗೇ ಇಟ್ಟುಕೊಂಡಿರುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರದ್ದು ಪೋಸ್ಟರ್ ಬೇಕು ಎಂದಾಗ ಅವರು ಎಲ್ಲ ಒಟ್ಟಿಗೇ ಹಾಕಿ ಪ್ರಿಂಟ್ ಮಾಡಿದ್ದಾರೆ ಅಷ್ಟೇ ಎಂದು ಹೇಳಿ ನುಣುಚಿಕೊಂಡಿದೆಯೇ ಹೊರತು, ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರ ಎಂಬುದನ್ನು ಈಗಲೂ ಒಪ್ಪಿಲ್ಲ.
ಇದನ್ನೂ ಓದಿ: Veer Savarkar | ವೀರ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದಿದ್ದೇಕೆ?