Site icon Vistara News

Kedarnath Temple: ಕೇದಾರನಾಥ ದೇಗುಲ ಚಿನ್ನದ ಹಗರಣ; ಉನ್ನತ ಸಮಿತಿ ರಚನೆಗೆ ಸರ್ಕಾರ ನಿರ್ಧಾರ

Kedarnath Temple

#image_title

ಚಾರ್​ಧಾಮ್​​ಗಳಲ್ಲಿ ಒಂದಾದ ಕೇದಾರನಾಥ ದೇಗುಲದ (Kedarnath Temple) ಗರ್ಭಗುಡಿಯ ಗೋಡೆಗಳಿಗೆ ಚಿನ್ನದ ಲೇಪನ ಮಾಡಲಾಗಿದೆ (Gold Plating) ಎಂದು ಹೇಳಲಾಗಿತ್ತು. ಆದರೆ ಈ ವಿಷಯದಲ್ಲಿ ವಿವಾದ ಎದ್ದಿದೆ. ಗರ್ಭಗುಡಿ ಗೋಡೆಗಳಿಗೆ ಚಿನ್ನ ಲೇಪನ ಮಾಡಿಲ್ಲ. ಬದಲಾಗಿ ಹಿತ್ತಾಳೆ ಲೇಪನವಾಗಿದೆ. ಆದರೆ ಚಿನ್ನ ಎಂದು ಬಿಲ್ ಮಾಡಲಾಗಿದೆ. ಒಟ್ಟಾರೆ, 12,500 ಲಕ್ಷ ರೂಪಾಯಿ ಹಗರಣ (Scam in Gold Plating) ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಗಂಭೀರ ಸ್ವರೂಪದ ಆರೋಪದ ಬಗ್ಗೆ ತನಿಖೆ ನಡೆಸಲು ಈಗ ಉತ್ತರಾಖಂಡ್​ ಸರ್ಕಾರ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಲು ನಿರ್ಧಾರ ಮಾಡಿದೆ. ‘ಘರ್ವಾಲ್​ನ ಆಯುಕ್ತರ ನೇತೃತ್ವದ, ಉನ್ನತ ಮಟ್ಟದ ಸಮಿತಿ ರಚನೆ ಮಾಡುವಂತೆ ಸಾಂಸ್ಕೃತಿಕ ಮತ್ತು ಧಾರ್ಮಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಹರಿಚಂದ್ರ ಸೇಮ್​ವಾಲ್​ ಅವರಿಗೆ ಸೂಚನೆ ನೀಡಿದ್ದಾಗಿ ರಾಜ್ಯ ಪ್ರವಾಸೋದ್ಯಮ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಚಿವಾಲಯದ ಮಂತ್ರಿ ಸತ್ಪಾಲ್​ ಮಹಾರಾಜ್ ತಿಳಿಸಿದ್ದಾರೆ.

ಕೇದಾರನಾಥ ದೇಗುಲದ ಗರ್ಭಗುಡಿ ಗೋಡೆಗಳಿಗೆ ಸುಮಾರು 23,777.800 ಗ್ರಾಂ.ಗಳಷ್ಟು ಚಿನ್ನವನ್ನ ಲೇಪಿಸಲಾಗಿದೆ ಎಂದು ಈ ಹಿಂದೆ ಬದ್ರಿನಾಥ-ಕೇದಾರನಾಥ ದೇಗುಲ ಸಮಿತಿ ಪ್ರಕಟಣೆಯಲ್ಲಿ ತಿಳಿಸಿತ್ತು. ಇಷ್ಟು ತೂಕದ ಚಿನ್ನದ ಸದ್ಯದ ಬೆಲೆ ಅಂದಾಜು 14.38 ಕೋಟಿ ರೂಪಾಯಿ. ಈ ಚಿನ್ನದೊಂದಿಗೆ 1,001.300 ಕೆಜಿ ತೂಕದ ತಾಮ್ರದ ಫಲಕವನ್ನೂ ಬಳಸಲಾಗಿದೆ. ಇದರ ಮೌಲ್ಯ 29 ಲಕ್ಷ ರೂಪಾಯಿ ಎಂದು ಸಮಿತಿ ಹೇಳಿತ್ತು. ಆದರೆ ಕೇದಾರನಾಥ ದೇಗುಲದ ತೀರ್ಥ ಪುರೋಹಿತ, ಚಾರ್​ಧಾಮ್​ ಮಹಾಪಂಚಾಯತ್​​ನ ಉಪಾಧ್ಯಕ್ಷ ಸಂತೋಷ್ ತ್ರಿವೇದಿ ಅವರು ಈ ಬಗ್ಗೆ ಆರೋಪ ಮಾಡಿದ್ದಾರೆ. ಗರ್ಭಗುಡಿಗೆ ಚಿನ್ನದ ಫಲಕಗಳನ್ನು ಹಾಕಿಲ್ಲ. ಸುಮ್ಮನೆ ಬಿಲ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಹಾಗೇ, ಒಂದು ವಿಡಿಯೊವನ್ನೂ ಬಿಡುಗಡೆ ಮಾಡಿದ್ದರು.

ಈ ವಿಚಾರವನ್ನು ಉತ್ತರಾಖಂಡ್ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ದೇಗುಲದ ಗರ್ಭಗುಡಿಗೆ ಚಿನ್ನದ ಲೇಪನ ಮಾಡುವಾಗ ಕೆಲವರು ಸಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಇದು ದೇವಾಲಯದ ಪುರಾತನ ನಿಯಮವನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದೂ ವಾದಿಸಿದ್ದರು. ಹಾಗಿದ್ದಾಗ್ಯೂ ಕೇದಾರನಾಥ ದೇಗುಲದ ಗರ್ಭಗುಡಿಗೆ ಚಿನ್ನದ ಫಲಕ ಅಳವಡಿಸಲು, ಬದ್ರಿನಾಥ-ಕೇದಾರನಾಥ ದೇವಸ್ಥಾನ ಸಮಿತಿ ಕಾಯ್ದೆ 1939ರ ನಿಯಮಗಳ ಅನ್ವಯ ರಾಜ್ಯ ಸರ್ಕಾರ ಅನುಮತಿ ಕೊಟ್ಟಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ತಜ್ಞರ ಮೇಲುಸ್ತುವಾರಿಯಲ್ಲೇ ಚಿನ್ನ ಲೇಪನ ಕಾರ್ಯವೂ ನಡೆದಿತ್ತು. ಇನ್ನು ಲೇಪನದ ಚಿನ್ನವನ್ನು ದಾನಿಯೊಬ್ಬರು ಕೊಟ್ಟಿದ್ದರು ಹೊರತು, ಇದರ ಖರೀದಿಯಲ್ಲಿ ದೇಗುಲದ ಸಮಿತಿಯ ನೇರಪಾತ್ರವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: Kedarnath Dham: ಕೇದಾರನಾಥ ದೇಗುಲದ ಬಗ್ಗೆ ನೀವು ತಿಳಿಯಲೇಬೇಕಾದ ವಿಚಾರಗಳಿವು

ಇನ್ನು ಕೇದಾರನಾಥ ಚಿನ್ನದ ಹಗರಣ ತನಿಖೆಗಾಗಿ ರಚಿಸಲಿರುವ ಸಮಿತಿಯಲ್ಲಿ ತಾಂತ್ರಿಕ ತಜ್ಞರು ಹಾಗೂ ಅಕ್ಕಸಾಲಿಗರು, ಪರಿಣತರು ಇರಲಿದ್ದಾರೆ. ಇದೊಂದು ಅತ್ಯಂತ ಸೂಕ್ಷ್ಮವಾದ ವಿಷಯವಾಗಿದೆ. ತನಿಖೆ ವರದಿ ಹೊರಬಂದ ಮೇಲೆ, ತಪ್ಪಿತಸ್ಥರು ಯಾರೇ ಆದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸತ್ಪಾಲ್​ ಮಹಾರಾಜ್ ಹೇಳಿದ್ದಾರೆ.

Exit mobile version