Site icon Vistara News

ಪ್ರಧಾನಿ ಮೋದಿ-ಯೋಗಿ ಆದಿತ್ಯನಾಥ್​ಗೆ ಜೀವ ಬೆದರಿಕೆ ಹಾಕಿದ್ದ ಬಾಲಕ ಅರೆಸ್ಟ್​; ಮಾಧ್ಯಮ ಸಂಸ್ಥೆಗೆ ಇಮೇಲ್​ ಕಳಿಸಿದ್ದನೀತ!

Schoolboy arrested by Noida Police For sending an threat email to assassinate PM Modi and Yogi Adityanath

#image_title

ನವ ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)​ ಅವರಿಗೆ ಜೀವ ಬೆದರಿಕೆ ಹಾಕಿದ 16ವರ್ಷದ ಹುಡುಗನನ್ನು ನೊಯ್ಡಾ ಪೊಲೀಸರು ಲಖನೌದಿಂದ ಬಂಧಿಸಿದ್ದಾರೆ. ಈ ಬಾಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್​​ರನ್ನು ಹತ್ಯೆ ಮಾಡುವುದಾಗಿ ಮಾಧ್ಯಮ ಸಂಸ್ಥೆಯೊಂದಕ್ಕೆ ಇಮೇಲ್ ಸಂದೇಶ ಕಳಿಸಿದ್ದ. ಹುಡುಗನನ್ನು ಬಂಧಿಸಿದ್ದ ಪೊಲೀಸರು ಬಾಲಾಪರಾಧ ವಿಚಾರಣಾ ಕೋರ್ಟ್​ಗೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಬಳಿಕ ಆತನಿಗೆ ಕೋರ್ಟ್​ ಜಾಮೀನು ಕೊಟ್ಟು, ಎಚ್ಚರಿಕೆ ನೀಡಿ ಕಳಿಸಿದೆ.

ಹುಡುಗ ಮೂಲತಃ ಬಿಹಾರದವನಾಗಿದ್ದು, ಲಖನೌದ ಚಿನ್ಹಾತ್​ ಎಂಬಲ್ಲಿ ಅರೆಸ್ಟ್​ ಮಾಡಲಾಗಿತ್ತು. ಬಳಿಕ ನೊಯ್ಡಾಕ್ಕೆ ಕರೆದುಕೊಂಡುಬಂದು ಕೋರ್ಟ್​ಗೆ ಹಾಜರುಪಡಿಸಲಾಗಿತ್ತು ಎಂದು ಇಲ್ಲಿನ ಹೆಚ್ಚುವರಿ ಆಯುಕ್ತ ರಜನೀಶ್ ವರ್ಮಾ ತಿಳಿಸಿದ್ದಾರೆ. ’ ಈ ಹುಡುಗ ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್​​ರನ್ನು ಕೊಲ್ಲುವುದಾಗಿ ಯಾವ ಮಾಧ್ಯಮ ಸಂಸ್ಥೆಗೆ ಮೇಲ್​ ಮಾಡಿದ್ದನೋ, ಆ ಸಂಸ್ಥೆಯ ಪ್ರತಿನಿಧಿಯೊಬ್ಬರು ಕೊಟ್ಟ ದೂರಿನ ಅನ್ವಯ ಏಪ್ರಿಲ್​ 5ರಂದು ಸೆಕ್ಟರ್​ 20 ಪೊಲೀಸ್ ಠಾಣೆಯಲ್ಲಿ ಪ್ರಕರಣ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ಪೊಲೀಸರು ಕೂಡಲೇ ತನಿಖೆ ಕೈಗೊಂಡಿದ್ದರು. ಇಮೇಲ್​ ಕಳಿಸಿದವನನ್ನು ನಮ್ಮ ಟೆಕ್ನಿಕಲ್​ ತಂಡ ಟ್ರೇಸ್ ಮಾಡಿತ್ತು. ಸಂದೇಶ ಕಳಿಸಿದ್ದು, ಲಖನೌದ ಚಿನ್ಹಾತ್​​ನಿಂದ ಎಂದು ಗೊತ್ತಾಗಿ ಅಲ್ಲಿಗೆ ಹೋಗಿ ತನಿಖೆ ನಡೆಸಿದಾಗ, ಆತ ಒಬ್ಬ ಶಾಲಾ ಹುಡುಗ ಎಂಬುದು ಬೆಳಕಿಗೆ ಬಂದಿದೆ.. ಆತನಿನ್ನೂ 11ನೇ ತರಗತಿ ಓದುತ್ತಿದ್ದಾನೆ. ಮುಂದಿನ ವರ್ಷ 12 ನೇ ತರಗತಿಗೆ ಕಾಲಿಡುತ್ತಿದ್ದಾನೆ’ ಎಂದು ಆಯುಕ್ತರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ಗೆ ಪದೇಪದೆ ಜೀವ ಬೆದರಿಕೆ ಬರುತ್ತಲೇ ಇರುತ್ತದೆ. ಇವರಿಬ್ಬರೂ ‘ಸಾರ್ವಕಾಲಿಕ’ ಬೆದರಿಕೆಗೆ ಒಳಪಟ್ಟವರಾಗಿದ್ದಾರೆ. ಇಷ್ಟು ದಿನ ಯಾವುದಾದರೂ ಉಗ್ರಸಂಘಟನೆ, ದೇಶವಿರೋಧಿ ಸಂಘಟನೆಗಳಿಂದ ಬೆದರಿಕೆ ಬರುತ್ತಿತ್ತು. ಈಗ ಇನ್ನೂ 18ತುಂಬದ ಶಾಲಾ ಬಾಲಕನೊಬ್ಬ ಹತ್ಯೆ ಬೆದರಿಕೆಯೊಡ್ಡಿದ್ದ. ಕಳೆದ ನವೆಂಬರ್​ನಲ್ಲಿ 25ವರ್ಷದ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿಗೆ ಬೆದರಿಕೆಯೊಡ್ಡಿ ಸಿಕ್ಕಿಬಿದ್ದಿದ್ದ.

ಇದನ್ನೂ ಓದಿ: Best Chief Minister | ಈ ಬಾರಿಯೂ ಯೋಗಿ ಆದಿತ್ಯನಾಥ್‌ ದೇಶದ ಬೆಸ್ಟ್‌ ಸಿಎಂ, ನಂತರದ ಸ್ಥಾನ ಯಾರಿಗೆ?

Exit mobile version