ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಶಾಲಾ ಬಸ್ವೊಂದು ಪಲ್ಟಿಯಾಗಿ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, 12 ಮಕ್ಕಳು ಸೇರಿ ಒಟ್ಟು 35 ಮಂದಿ ಗಾಯಗೊಂಡಿದ್ದಾರೆ. ಈ ಬಸ್ ಜೌನ್ಪುರದಿಂದ ಪ್ರಯಾಗ್ರಾಜ್ಕ್ಕೆ ಹೊರಟಿತ್ತು. ಜೌನ್ಪುರದ ಹಳ್ಳಿಯೊಂದರ ಶಾಲಾ ಮಕ್ಕಳು ತುಂಬ ಖುಷಿಯಿಂದ ಪ್ರಯಾಗರಾಜ್ಕ್ಕೆ ಪ್ರವಾಸಕ್ಕೆ ಹೊರಟಿದ್ದರು. ಅತಿವೇಗದಿಂದ ಚಲಿಸುತ್ತಿದ್ದ ಬಸ್ಗೆ ಅಡ್ಡಬಂದ ಬೈಕ್ ಸವಾರನನ್ನು ತಡೆಯಲು ಹೋದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ತತ್ಪರಿಣಾಮ ಬಸ್ ನಡುರಸ್ತೆಯಲ್ಲೇ ಪಲ್ಟಿ ಹೊಡೆದಿದೆ.
ಬಸ್ ಅಪಘಾತಕ್ಕೀಡಾದ ವಿಷಯವನ್ನು ಸ್ಥಳೀಯರು ಹಂಡಿಯಾ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗಾಯಗೊಂಡವರನ್ನೆಲ್ಲ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದರು. ಮೃತಪಟ್ಟ ಇಬ್ಬರು ಮಕ್ಕಳನ್ನು ಅಂಕಿತ್ ಮತ್ತು ಅನುರಾಗ್ ಎಂದು ಗುರುತಿಸಲಾಗಿದೆ.
‘ಈ ಬಸ್ ಜೌನ್ಪುರದ ಶ್ರೀಮತಿ ಕಾಂತಿ ದೇವಿ ಜನತಾ ವಿದ್ಯಾಲಯದಿಂದ ಬಂದಿತ್ತು. ಇದರಲ್ಲಿ 75 ಮಕ್ಕಳು, 8 ಮಂದಿ ಶಾಲಾ ಶಿಕ್ಷಕರು ಸೇರಿ ಒಟ್ಟು 83 ಜನರಿದ್ದರು. ಚಾಲಕ ಬಸ್ನ್ನು ತುಂಬ ವೇಗವಾಗಿ ಡ್ರೈವ್ ಮಾಡುತ್ತಿದ್ದ. ಹಂಡಿಯಾದ ಹೆದ್ದಾರಿಯಲ್ಲಿ, ಬೈಕ್ ಸವಾರನೊಬ್ಬನಿಗೆ ಡಿಕ್ಕಿಯಾಗುವ ಸನ್ನಿವೇಶ ಬಂದಾಗ ಚಾಲಕ ಅದನ್ನು ತಪ್ಪಿಸಲು ಮುಂದಾದಾಗ ಸಂಪೂರ್ಣ ನಿಯಂತ್ರಣ ಕಳೆದುಕೊಂಡ. ಆಗಲೇ ಬಸ್ ಅಪಘಾತಕ್ಕೀಡಾಗಿದೆ’ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಅಭಿಷೇಕ್ ಅಗರ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: Yellapur News | ಕಾರು ಅಪಘಾತದಲ್ಲಿ ಖ್ಯಾತ ಯಕ್ಷಗಾನ ಭಾಗವತ ಮೃತ್ಯುವಶ