ಪಂಜಾಬ್ನ ಅಮೃತ್ಸರದಿಂದ ಸಿಂಗಾಪುರಕ್ಕೆ ಹೊರಟಿದ್ದ ಸ್ಕೂಟ್ ಏರ್ಲೈನ್ಸ್ಗೆ ಸೇರಿದ ವಿಮಾನವೊಂದು ಮಹಾ ಎಡವಟ್ಟು ಮಾಡಿದೆ. ನಿಗದಿತ ಸಮಯಕ್ಕಿಂತಲೂ ಸುಮಾರು ಮೂರ್ನಾಲ್ಕು ತಾಸು ಮುಂಚಿತವಾಗಿ ಟೇಕ್ಆಫ್ ಆಗಿದೆ. ಇದರ ಪರಿಣಾಮ ಸುಮಾರು 35 ಪ್ರಯಾಣಿಕರು ವಿಮಾನ ತಪ್ಪಿಸಿಕೊಳ್ಳುವಂತಾಯ್ತು. ವಿಮಾನ ಹೀಗೆ ಅವಧಿ ಪೂರ್ವ ಹೊರಟು ಹೋಗಿದ್ದೇಕೆ ಎಂಬ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ತನಿಖೆ ಕೈಗೆತ್ತಿಕೊಂಡಿದೆ.
ಅಮೃತ್ಸರ ವಿಮಾನ ನಿಲ್ದಾಣದಿಂದ ಈ ವಿಮಾನ ಬುಧವಾರ ಸಂಜೆ 7.55ಕ್ಕೆ ಹೊರಡಬೇಕಿತ್ತು. ಆದರೆ ಮಧ್ಯಾಹ್ನ 3ಗಂಟೆಗೇ ಟೇಕ್ಆಫ್ ಆಗಿದೆ. ವಿಮಾನ ತಪ್ಪಿಸಿಕೊಂಡ 35 ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಏರ್ಪೋರ್ಟ್ ಹೊರಗಡೆ ಪ್ರತಿಭಟನೆ ನಡೆಸಿದರು. ಅಲ್ಲಿದ್ದ ಅಧಿಕಾರಿಗಳಿಗೆ ದೂರನ್ನೂ ಕೊಟ್ಟಿದ್ದಾರೆ.
ಹೀಗೆ ವಿಮಾನ ಮುಂಚಿತವಾಗಿ ಟೇಕ್ಆಫ್ ಆಗಿದ್ದು ವಿವಾದ ಸೃಷ್ಟಿಯಾಗುತ್ತಿದ್ದಂತೆ ಅಮೃತ್ಸರ ವಿಮಾನ ನಿಲ್ದಾಣದ ನಿರ್ದೇಶಕ ವಿ.ಕೆ.ಸೇಠ್ ಹೇಳಿಕೆ ನೀಡಿದ್ದಾರೆ. ‘ಈ ವಿಮಾನಕ್ಕೆ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರಿಗೆಲ್ಲ, ಅದರ ಸಮಯ ಬದಲಾದ ಬಗ್ಗೆ ಇಮೇಲ್ ಮೂಲಕ ಮಾಹಿತಿ ನೀಡಲಾಗಿತ್ತು. ಏಜೆಂಟ್ಗಳಿಗೂ ತಿಳಿಸಲಾಗಿತ್ತು. ಆದರೆ ಇಲ್ಲಿ ಏಜೆಂಟ್ಗಳು ಎಡವಿದ್ದಾರೆ. ಯಾರೆಲ್ಲ ಏಜೆಂಟ್ಗಳ ಮೂಲಕ ಟಿಕೆಟ್ ಬುಕ್ ಮಾಡಿದ್ದರೋ, ಅವರಿಗೆ ಏಜೆಂಟ್ಗಳು ಮಾಹಿತಿ ನೀಡಿರಲಿಲ್ಲ. ಹೀಗಾಗಿ ಆ ಪ್ರಯಾಣಿಕರು ವಿಮಾನ ತಪ್ಪಿಸಿಕೊಂಡರು’ ಎಂದು ಹೇಳಿದ್ದಾರೆ. ಆದರೆ ಹೀಗೆ ವಿಮಾನ ಅರ್ಜೆಂಟ್ ಆಗಿ, ಮುಂಚಿತವಾಗಿಯೇ ಹೊರಡಲು ಕಾರಣ ಏನು ಗೊತ್ತಾಗಲಿಲ್ಲ.
ಕಳೆದ ವಾರ ಅಂದರೆ ಜನವರಿ 9ರಂದು ಬೆಂಗಳೂರು-ದೆಹಲಿ ಗೋ ಫಸ್ಟ್ ವಿಮಾನವೊಂದು ಹೀಗೇ ಮಾಡಿತ್ತು. ಬೆಂಗಳೂರು ಏರ್ಪೋರ್ಟ್ನಿಂದ ನಿಗದಿತ ಸಮಯಕ್ಕೂ ಪೂರ್ವ ಟೇಕ್ ಆಫ್ ಆಗಿತ್ತು. ಅಂದು 55 ಪ್ರಯಾಣಿಕರಿಗೆ ವಿಮಾನ ತಪ್ಪಿತ್ತು. ಹಲವರು ಟ್ವಿಟರ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಘಟನೆ ಸಂಬಂಧ ಗೋಏರ್ ಏರ್ಲೈನ್ಸ್ಗೆ DGCA ಶೋಕಾಸ್ ನೋಟಿಸ್ ನೀಡಿದೆ.
ಇದನ್ನೂ ಓದಿ: Cockroach In Meal | ವಿಮಾನದಲ್ಲಿ ಕೊಟ್ಟ ಊಟದಲ್ಲಿ ಜಿರಳೆ ಪತ್ತೆ, ಇದಕ್ಕೆ ಏರ್‌ಲೈನ್ಸ್ ಏನು ಹೇಳತ್ತೆ?