Site icon Vistara News

Secunderabad Fire | ಇ-ಸ್ಕೂಟರ್​ ಮಿತಿಮೀರಿ ಚಾರ್ಜ್​ ಮಾಡಿದ್ದೇ ಬೆಂಕಿಗೆ ಕಾರಣ; ತನಿಖೆ ಪ್ರಾರಂಭಿಸಿದ ಪೊಲೀಸ್​

E-Scooters Fire

ಸಿಕಂದರಾಬಾದ್​: ತೆಲಂಗಾಣದ ಸಿಕಂದರಾಬಾದ್​​ನ ಬಹುಮಹಡಿ ಕಟ್ಟಡವೊಂದರಲ್ಲಿ ಸೆಪ್ಟೆಂಬರ್​ 12ರಂದು ರಾತ್ರಿ ಹೊತ್ತಿಕೊಂಡ ಬೆಂಕಿ (Secunderabad Fire) 8 ಜನರ ಪ್ರಾಣ ತೆಗೆದಿದೆ. ಈ ಕಟ್ಟಡದಲ್ಲಿ ಇದ್ದ ಎಲೆಕ್ಟ್ರಿಕ್​ ಸ್ಕೂಟರ್​ ಶೋರೂಮಿನ ಚಾರ್ಜಿಂಗ್​ ಪಾಯಿಂಟ್​​ನಲ್ಲಿ ಶಾರ್ಟ್​ಸರ್ಕ್ಯೂಟ್​​ನಿಂದ ಹೊತ್ತಿಕೊಂಡ ಬೆಂಕಿ, ಅದೇ ಕಟ್ಟಡದ ಕೊನೇ ಫ್ಲೋರ್​​ನಲ್ಲಿರುವ ಹೋಟೆಲ್​ಗೂ ಪಸರಿಸಿತ್ತು. ಆ ಹೊತ್ತಲ್ಲಿ ಸುಮಾರು 25 ಜನರು ಹೋಟೆಲ್​ನಲ್ಲಿದ್ದರು. ಮೃತಪಟ್ಟ ಎಂಟೂ ಜನ ಬೆಂಕಿಯ ಹೊಗೆಯಿಂದ ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ಕೇಸ್​ಗೆ ಸಂಬಂಧಪಟ್ಟಂತೆ ಕಟ್ಟಡದ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶೋರೂಮ್​​ನಲ್ಲಿ ಸ್ಕೂಟರ್​ಗಳನ್ನು ಅತಿಯಾಗಿ ಚಾರ್ಜ್​ ಮಾಡಿದ್ದರಿಂದಲೇ ಶಾರ್ಟ್​ ಸರ್ಕ್ಯೂಟ್ ಆಗಿದೆ ಎಂದು ಹೇಳಲಾಗಿದೆ.

ಮೃತರ ಕುಟುಂಬಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ತಲಾ 3 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಹಾಗೇ, ಪ್ರಧಾನಿ ನರೇಂದ್ರ ಮೋದಿ ತಲಾ 2 ಲಕ್ಷ ರೂ. ನೀಡುವುದಾಗಿ ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡವರ ಕುಟುಂಬಕ್ಕೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಕಚೇರಿ ಟ್ವೀಟ್ ಮಾಡಿ ತಿಳಿಸಿದೆ.

ಈ ಕಟ್ಟಡದ ನೆಲಮಾಳಿಗೆ ಪಾರ್ಕಿಂಗ್​​ಗಷ್ಟೇ ಬಳಕೆಯಾಗಬೇಕು. ಆದರೆ ಶೋ ರೂಮಿನ ಮಾಲೀಕರು ಅದನ್ನು ಬೇರೆ ಕೆಲವು ಉದ್ದೇಶಗಳಿಗೂ ಬಳಸಿಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಬಗ್ಗೆಯೂ ತನಿಖೆ ನಡೆಸುವುದಾಗಿ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾಗೇ, ಸ್ಕೂಟರ್​​ಗಳನ್ನು ಮಿತಿಮೀರಿ ಚಾರ್ಜ್​ ಮಾಡಿದ್ದು ಶೋರೂಮಿನಲ್ಲೋ ಅಥವಾ ನೆಲಮಾಳಿಗೆಯಲ್ಲೋ ಎಂಬುದನ್ನೂ ಪತ್ತೆ ಮಾಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ಇ- ಬೈಕ್‌ ಚಾರ್ಜಿಂಗ್‌ ಯುನಿಟ್‌ನಿಂದ ಹೋಟೆಲ್‌ಗೆ ಬೆಂಕಿ, 8 ಸಾವು

Exit mobile version