ನವದೆಹಲಿ: ಪೆಟ್ರೋಲ್ ಪಂಪ್ ದರೋಡೆ (Petrol Pump Robbery) ಮಾಡಲು ಬಂದ ದರೋಡೆಕೋರರ ಪೈಕಿ ಒಬ್ಬನನ್ನು ಸೆಕ್ಯುರಿಟಿ ಗಾರ್ಡ್ ಗುಂಡು ಹೊಡೆದು ಸಾಯಿಸಿದ ವಿಡಿಯೋ ವೈರಲ್ ಆಗಿದ್ದು, ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ವ್ಯಾಪಕ ಟೀಕೆ ಕೇಳಿ ಬರುತ್ತಿದೆ. ನಿತ್ಯ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾನುವಾರ ಸಾಯಂಕಾಲ ಪಂಜಾಬ್‌ನ ಅಮೃತಸರದ ಮಾಲಿಯಾ ಹಳ್ಳಿ ಹತ್ತಿರ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಮೃತಸರದ ಮಾಲಿಯಾ ಹಳ್ಳಿಯಲ್ಲಿರುವ ಪೆಟ್ರೋಲ್ ಬಂಕ್ ದರೋಡೆ ಮಾಡುವ ಪ್ರಯತ್ನ ನಡೆದಿತ್ತು. ದರೋಡೆಕೋರರಿಗೆ ಗಾರ್ಡ್ ಗುಂಡು ಹೊಡೆದಿದ್ದಾರೆ. ಈ ಘಟನೆಯಲ್ಲಿ ಒಬ್ಬ ಸತ್ತಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆಯನ್ನು ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಶೋಧಿಸಲಾಗುತ್ತಿದೆ ಎಂದು ಅಮೃತಸರ ಡಿಎಸ್‌ಪಿ ಗುರ್ಮೀತ್ ಸಿಂಗ್ ಅವರು ತಿಳಿಸಿದ್ದಾರೆ.
ಏನಾಗಿತ್ತು?
ಮುಖಕ್ಕೆ ಮಾಸ್ಕ್ ಹಾಕಿಕೊಂಡ ಇಬ್ಬರು ದರೋಡೆಕೋರರು ಬೈಕಿನಲ್ಲಿ ಬಂದು ದರೋಡೆಗೆ ಮುಂದಾಗುತ್ತಾರೆ. ಆಗ ಸೆಕ್ಯುರಿಟಿ ಗಾರ್ಡ್ ಒಬ್ಬರು ಇಬ್ಬರ ದರೋಡೆಕೋರರ ಪೈಕಿ ಒಬ್ಬನಿಗೆ ಗುಂಡು ಹಾರಿಸಿತ್ತಾರೆ. ಮತ್ತೊಬ್ಬ ದರೋಡೆಕೋರ ಅಲ್ಲಿಂದ ಪರಾರಿಯಾಗುತ್ತಿರುವ ಸಿಸಿಟಿವಿ ದೃಶ್ಯಗಳು ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
ಪಂಜಾಬ್‌ನಲ್ಲಿ ಆಪ್ ಸರ್ಕಾರವು ಅಸ್ತಿತ್ವಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಹಲವರು ಪ್ರತಿಕ್ರಿಯಿಸಿದ್ದಾರೆ. ಭಗವಂತ್ ಮಾನ್ ಅವರು ಅಪರಾಧಗಳನ್ನು ಮಟ್ಟ ಹಾಕುವುದರಲ್ಲಿ ವಿಫಲರಾಗುತ್ತಿದ್ದಾರೆಂದು ಹಲವರು ತಿಳಿಸಿದ್ದಾರೆ. ಪಂಜಾಬ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ.
ಇದನ್ನೂ ಓದಿ | ಹೋಮ್‌ವರ್ಕ್ ಮಾಡದ ಮಗಳನ್ನು ಬಿಸಿ ಟೆರೇಸ್‌ನಲ್ಲಿ ಕಟ್ಟಿಹಾಕಿದ ತಾಯಿ, ವೈರಲ್ ವಿಡಿಯೋದಿಂದ ಪತ್ತೆ