ಮುಂಬಯಿ: ಗೃಹ ಸಚಿವ ಅಮಿತ್ ಶಾ (Amit Shah) ಅವರು ಸೋಮವಾರ ಮುಂಬಯಿಗೆ ಭೇಟಿ ನೀಡಿದ್ದ ವೇಳೆ ಭದ್ರತಾ ಲೋಪವಾಗಿದೆ. ಕೇಂದ್ರ ಗೃಹ ಸಚಿವಾಲಯದ ಭದ್ರತಾ ಸಿಬ್ಬಂದಿಯಂತೆ ವೇಷ ಹಾಕಿಕೊಂಡು ಬಂದು, ಅಮಿತ್ ಶಾ ಹಿಂದೆಯೇ ತಿರುಗುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತ 32 ವರ್ಷದವನಾಗಿದ್ದು, ಹೇಮಂತ್ ಪವಾರ್ ಎಂದು ಹೆಸರು. ಆಂಧ್ರಪ್ರದೇಶದ ಸಂಸದರೊಬ್ಬರ ಆಪ್ತ ಕಾರ್ಯದರ್ಶಿ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆಯ ಏಕನಾಥ್ ಶಿಂಧೆ ಬಣ ಒಟ್ಟಾಗಿ ಸರ್ಕಾರ ರಚನೆ ಮಾಡಿದ ಮೇಲೆ ಇದೇ ಮೊದಲ ಬಾರಿಗೆ ಅಮಿತ್ ಶಾ ಸೋಮವಾರ (ಸೆ. 5) ಅಲ್ಲಿಗೆ ಭೇಟಿ ಕೊಟ್ಟಿದ್ದರು. ಎರಡು ದಿನಗಳ ಪ್ರವಾಸ ಅವರದ್ದಾಗಿತ್ತು. ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಭದ್ರತೆ ವ್ಯವಸ್ಥೆ ರೂಪಿಸಲಾಗಿತ್ತು. ಆದರೆ ಈ ಹೇಮಂತ್ ಪವಾರ್ ತಾನೂ ಒಬ್ಬ ಭದ್ರತಾ ಸಿಬ್ಬಂದಿಯಂತೆ ವರ್ತಿಸಿದ್ದ. ಬಿಳಿ ಬಣ್ಣದ ಶರ್ಟ್ ಮತ್ತು ನೀಲಿ ಬ್ಲೇಜರ್ ಧರಿಸಿ, ಗೃಹ ಸಚಿವಾಲಯದ ಐಡಿ ಕಾರ್ಡ್ ಕೂಡ ಹಾಕಿಕೊಂಡಿದ್ದ. ಅಮಿತ್ ಶಾ ಹೋದಲ್ಲೆಲ್ಲ ಇವನೂ ಕಾಣಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿ ನೀಲ್ಕಾಂತ್ ಪಾಟೀಲ್ ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ 12.15ರ ಸುಮಾರಿಗೆ ಅಮಿತ್ ಶಾ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಿವಾಸಕ್ಕೆ ಹೋಗಿದ್ದರು. ಅಲ್ಲಿಯೂ ಹೇಮಂತ್ ಕಾಣಿಸಿಕೊಂಡಿದ್ದ. ಗೃಹಸಚಿವರು ಅಲ್ಲಿಂದ ಏಕನಾಥ ಶಿಂಧೆ ಮನೆಗೆ ಹೋದಾಗ ಹೇಮಂತ್ ಪವಾರ್ ಅಲ್ಲಿಗೂ ಬಂದಿದ್ದ. ಈತನ ಅನುಮಾನಾಸ್ಪದ ನಡೆ ನೋಡಿ, ಬಂಧಿಸಲಾಗಿದೆ. ವಿಚಾರಣೆಗೆ ಒಳಪಡಿಸಲಾಗಿದೆ. ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳಿಸಲಾಗಿದೆ ಎಂದೂ ನೀಲ್ಕಾಂತ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: BJP Strategy | ಲೋಕಸಭೆ ಚುನಾವಣೆಗೆ ಅಮಿತ್ ಶಾ ರಣತಂತ್ರ ಶುರು, 144 ಕ್ಷೇತ್ರಗಳ ಬಗ್ಗೆಯೇ ಏಕೆ ಪ್ರಾಮುಖ್ಯತೆ?