ಇತ್ತೀಚೆಗೆ ಸೀಮಾ ಹೈದರ್ ( Seema Haider) ಎಂಬ ಮಹಿಳೆ, ತನ್ನ ನಾಲ್ಕು ಮಕ್ಕಳನ್ನು ಕಟ್ಟಿಕೊಂಡು ಭಾರತಕ್ಕೆ ಬಂದಿದ್ದಳು. ಪಬ್ಜಿ ಆನ್ಲೈನ್ ಆಟದ (PUBG Game) ಮೂಲಕ ಪರಿಚಯವಾಗಿದ್ದ ಭಾರತದ ಗ್ರೇಟರ್ ನೊಯ್ಡಾ ನಿವಾಸಿ ಸಚಿನ್ ಸಿಂಗ್ (22)ನನ್ನು ಅರಸಿ, ಅವರನ್ನೇ ಮದುವೆಯಾಗುತ್ತೇನೆ ಎಂದು ಹೇಳಿಕೊಂಡು ಆಕೆ ಇಲ್ಲಿಗೆ ಬಂದಿದ್ದಾಳೆ. ಸದ್ಯ ಸೀಮಾ ಹೈದರ್ ಮತ್ತು ಆಕೆಯ ಮಕ್ಕಳು, ಸಚಿನ್ ಸಿಂಗ್ ಎಲ್ಲರೂ ಪೊಲೀಸ್ ಕಣ್ಗಾವಲಿನಲ್ಲಿ ಇದ್ದಾರೆ. ಹೀಗಿರುವಾಗ ಅತ್ತ ಸೌದಿ ಅರೇಬಿಯಾದಲ್ಲಿ ಇರುವ ಸೀಮಾ ಹೈದರ್ ಪತಿ ಗುಲಾಂ ಹೈದರ್ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ನನ್ನ ಪತ್ನಿ ಮತ್ತು ಮಕ್ಕಳನ್ನು ವಾಪಸ್ ಪಾಕಿಸ್ತಾನಕ್ಕೆ ಕಳಿಸಿ’ ಎಂದು ಭಾರತದ ಮೋದಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸೀಮಾ ಹೈದರ್ ಮತ್ತು ಗುಲಾಂ ಹೈದರ್ ನಡುವೆ ಜಗಳ ಆಗುತ್ತಿತ್ತು. ಗುಲಾಂ ಹೈದರ್ ಉದ್ಯೋಗಕ್ಕಾಗಿ ಸೌದಿ ಅರೇಬಿಯಾದಲ್ಲಿ ಇದ್ದರೆ, ಅವನೊಂದಿಗೆ ಇರಲು ಸಾಧ್ಯವಿಲ್ಲ ಎಂದು ಹೇಳಿ ಸೀಮಾ ಪಾಕಿಸ್ತಾನದಲ್ಲಿಯೇ ತನ್ನ ಮಕ್ಕಳೊಂದಿಗೆ ವಾಸವಾಗಿದ್ದರು. 2020ರಲ್ಲಿ ಪಬ್ಜಿ ಆಟದ ಮೂಲಕ ಸಚಿನ್ ಸಿಂಗ್ ಪರಿಚಯವಾದ ಮೇಲೆ, ಅವನೊಂದಿಗಿನ ಸ್ನೇಹ ಪ್ರೀತಿಯಾಯಿತು. ಗಂಡನ ಕಿರುಕುಳದಿಂದ ಬೇಸತ್ತಿದ್ದ ಸೀಮಾ ಹೈದರ್ ಸಹಜವಾಗಿಯೇ ಸಚಿನ್ ಪ್ರೀತಿಗೆ ಒಲಿದಿದ್ದಳು. 2022ರ ಮಾರ್ಚ್ ತಿಂಗಳಲ್ಲಿ ಸೀಮಾ ಮತ್ತು ಸಚಿನ್ ಒಮ್ಮೆ ನೇಪಾಳದಲ್ಲಿ ಭೇಟಿಯನ್ನೂ ಆಗಿದ್ದರು. ತಾವಿಬ್ಬರು ಮದುವೆಯನ್ನೂ ಆಗಲೇಬೇಕು ಎಂದು ನಿರ್ಧರಿಸಿಬಿಟ್ಟಿದ್ದರು. ಧೈರ್ಯ ಮಾಡಿ ಸೀಮಾ ಭಾರತದೊಳಗೆ ಕಾಲಿಟ್ಟಿದ್ದಳು. ಈಕೆ ಮಕ್ಕಳೊಟ್ಟಿಗೆ ಪಾಕಿಸ್ತಾನದಿಂದ ದುಬೈಗೆ ವಿಮಾನದಲ್ಲಿ ಹೋಗಿ, ಅಲ್ಲಿಂದ ನೇಪಾಳದ ಕಠ್ಮಂಡುವಿಗೆ ವಿಮಾನದಲ್ಲಿಯೇ ಬಂದು, ನೇಪಾಳದ ಗಡಿಯಿಂದ ಭಾರತಕ್ಕೆ ಅಕ್ರಮವಾಗಿ ನುಸುಳಿದ್ದಳು.
ಇದೀಗ ಗುಲಾಂ ಹೈದರ್ ಅವರು ವಿಡಿಯೊ ಮೂಲಕ ನರೇಂದ್ರ ಮೋದಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ವಿಷಯದಲ್ಲಿ ಭಾರತ ಸರ್ಕಾರ ಸಹಾಯ ಮಾಡಲೇಬೇಕು ಎಂದಿದ್ದಾರೆ. ‘ನನಗೆ ನನ್ನ ಹೆಂಡತಿ-ಮಕ್ಕಳು ಬೇಕು. ಪಾಕಿಸ್ತಾನ ನಮ್ಮ ಊರು. ನನ್ನ ಪತ್ನಿಗೆ ಭಾರತದ ವ್ಯಕ್ತಿ ಪಬ್ಜಿ ಆಟದ ಮೂಲಕ ಆಮಿಷವೊಡ್ಡಿದ್ದಾನೆ. ಆಕೆಯ ಮನಸು ಕೆಡಿಸಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ. ನನ್ನ ಪತ್ನಿ-ಮಕ್ಕಳು ಸುರಕ್ಷಿತವಾಗಿ ಮರಳಬೇಕು. ಇದಕ್ಕೆ ಭಾರತದ ಮೋದಿ ಸರ್ಕಾರ ಸಹಾಯ ಮಾಡಲೇಬೇಕು. ನಾವು ಕುಟುಂಬದವರು ಎಲ್ಲ ಒಂದಾಗಬೇಕು ಎಂದು ಅತ್ಯಂತ ಭಾವುಕವಾಗಿ, ಕೈಜೋಡಿಸಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Viral News: ಪ್ರೀತಿಗೆಲ್ಲಿ ಗಡಿ? ಪ್ರಿಯಕರನ ಅರಸಿ 4 ಮಕ್ಕಳ ಜತೆ ಪಾಕ್‌ನಿಂದ ಭಾರತಕ್ಕೆ ಬಂದ ಮಹಿಳೆ, ಮುಂದೇನಾಯ್ತು?
ಗುಲಾಂ ಹೈದರ್ ಅವರು ಭಾರತದ ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಮಹಿಳೆ ಮಕ್ಕಳನ್ನು ಕರೆದುಕೊಂಡು ಭಾರತಕ್ಕೆ ಕಾಲಿಟ್ಟ ಬಗ್ಗೆ ಸತತವಾಗಿ ವರದಿ ಮಾಡಿವೆ. ಇದರಿಂದಲೇ ನನಗೂ ನನ್ನ ಪತ್ನಿ ಮಕ್ಕಳನ್ನು ಕರೆದುಕೊಂಡು ಅಲ್ಲಿಗೆ ಹೋಗಿದ್ದು ಗೊತ್ತಾಯಿತು. ಭಾರತದ ಮಾಧ್ಯಮಗಳ ಉಪಕಾರ ಮರೆಯೋದಿಲ್ಲ ಎಂದು ಹೇಳಿದ್ದಾರೆ.