ಲಖನೌ: ಡೆಂಗೆ ರೋಗಿಗಳಿಗೆ ರಕ್ತದ ಪ್ಲೇಟ್‌ಲೆಟ್ ಎಂದು ಮೂಸಂಬಿ ರಸ (Mosambi Platelets) ನೀಡಿದ ಪ್ರಕರಣದಲ್ಲಿ ಹತ್ತು ಜನರನ್ನು ಪ್ರಯಾಗರಾಜ್ ಪೊಲೀಸರು ಬಂಧಿಸಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಈ ನಕಲಿ ಪ್ಲೇಟ್‌ಲೆಟ್ ನೀಡಿದ ಪ್ರಕರಣಗಳು ವರದಿಯಾಗಿದ್ದವು. ಈ ಮೂಸಂಬಿ ರಸದಿಂದ ಒಬ್ಬ ರೋಗಿ ಮೃತಪಟ್ಟ ಘಟನೆ ನಡೆದಿತ್ತು. ಈ ಘಟನೆ ಸಂಬಂಧ ಅಧಿಕಾರಿಗಳು ವರದಿಯನ್ನು ಎದುರು ನೋಡುತ್ತಿದ್ದಾರೆ. ಆ ಬಳಿಕವಷ್ಟೇ ರೋಗಿ ಮೂಸುಂಬಿ ರಸದಿಂದಲೇ ಮೃತಪಟ್ಟಿದ್ದಾನೆಯೇ ಇಲ್ಲವೇ ಎಂಬುದು ಖಚಿತವಾಗಲಿದೆ.
ಬಂಧಿತರನ್ನು ಈ ಸಂಬಂಧ ವಿಚಾರಣೆಗೊಳಪಡಿಸಲಾಗಿದ್ದು, ಅವರು ಮೂಸುಂಬಿ ಜ್ಯೂಸ್ ಅನ್ನು ಪ್ಲೇಟ್‌ಲೆಟ್ ಆಗಿ ನೀಡಿರುವುದನ್ನು ನಿರಾಕರಿಸಿದ್ದಾರೆ. ರಕ್ತದ ಪ್ಲಾಸ್ಮಾವನ್ನು ಪ್ಲೇಟ್‌ಲೆಟ್‌ಗಳಾಗಿ ಮಾರಾಟ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಶೈಲೇಶ್ ಪಾಂಡೆ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಡೆಂಗೆ ಹೆಚ್ಚಾಗಿದೆ. ಹಾಗಾಗಿ, ಪ್ಲೇಟ್‌ಲೆಟ್‌ಗೆ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಯಾಗಿದೆ. ಬಡ ಜನರಿಂದ ಪ್ಲಾಸ್ಮಾ ಖರೀದಿಸಿ ಅದನ್ನು ಮಾರಾಟ ಮಾಡುವ ದಂಧೆಯಲ್ಲಿ ಈ ಬಂಧಿತರು ತೊಡಗಿಸಿಕೊಂಡಿದ್ದಾರೆಂದು ಅಧಿಕಾರಿಯು ತಿಳಿಸಿದ್ದಾರೆ. ಬಂಧಿತರಿಂದ ಪ್ಲಾಸ್ಮಾ ಪೌಚ್‌ಗಳು, ನಗದು, ಮೊಬೈಲ್, ವೆಹಿಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಕ್ರಮ ರೀತಿಯಲ್ಲಿ ರಕ್ತ ಪೂರೈಕೆ ಮಾಡುತ್ತಿದ್ದ 12 ವ್ಯಕ್ತಿಗಳನ್ನು ಕೆಲವು ದಿನಗಳ ಹಿಂದೆ ಪ್ರಯಾಗರಾಜ್ ಪೊಲೀಸರು ಬಂದಿಸಿದ್ದರು. ಈ ಘಟನೆಯ ಬೆನ್ನಲ್ಲೇ ಈಗ ಪ್ಲಾಸ್ಮಾ ಅಕ್ರಮ ಮಾರಾಟ ಜಾಲವೂ ಬೆಳಕಿಗೆ ಬಂದಿದೆ.
ಇದನ್ನೂ ಓದಿ | Rain Effects | ಮಲೇರಿಯ, ಡೆಂಗೆ, ಮೆದುಳು ಜ್ವರ ಹೆಚ್ಚಾದೀತು ಹುಷಾರು, ಮುನ್ನೆಚ್ಚರಿಕೆ ವಹಿಸಲು ಸೂಚನೆ