ಶಿಮ್ಲಾ: ಗೋಧ್ರಾ ಹತ್ಯಾಕಾಂಡದ ವೇಳೆ ಬಿಲ್ಕಿಸ್ ಬಾನೊ (Bilkis Bano Case) ಮೇಲೆ ಸಾಮೂಹಿಕವಾಗಿ ಅತ್ಯಾಚಾರಗೈದ ಅಪರಾಧಿಗಳನ್ನು ಗುಜರಾತ್ ಬಿಜೆಪಿ ಸರಕಾರ ಬಿಡುಗಡೆ ಮಾಡಿರುವುದಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತಿಪಕ್ಷಗಳು, ನಾಗರಿಕರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಈಗ ಬಿಜೆಪಿ ಹಿರಿಯ ನಾಯಕ, ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಾಂತಕುಮಾರ್ ಅವರೇ ಪಕ್ಷದ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ ೧೧ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದರಿಂದ ನನಗೆ ನೋವಾಗಿದೆ. ನಾಚಿಕೆಯಿಂದ ನನ್ನ ತಲೆ ತಗ್ಗುತ್ತಿದೆ. ಇಂತಹ ತಪ್ಪು ನಿರ್ಧಾರವನ್ನು ಹಿಂಪಡೆಯಲು ಆದೇಶಿಸಬೇಕು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇನೆ. ಹೆಣ್ಣುಮಕ್ಕಳನ್ನು ರಕ್ಷಿಸುತ್ತೇವೆ ಎಂದು ಹೇಳುವ ನಾವು ಇಂತಹ ನಿರ್ಧಾರಗಳಿಂದ ಯಾವ ಸಂದೇಶ ರವಾನಿಸಿದಂತಾಗುತ್ತದೆ” ಎಂದು ಪ್ರಶ್ನಿಸಿದ್ದಾರೆ.
ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಎಸಗಿದ ೧೧ ಅಪರಾಧಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಆದರೆ, ಗುಜರಾತ್ ಸರಕಾರವು ಸ್ವಾತಂತ್ರ್ಯ ದಿನದಂದು ಅವರನ್ನು ಬಿಡುಗಡೆ ಮಾಡಿದೆ. ಇದರ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ | Bilkis Bano Case | ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ