ಪ್ರಧಾನಿ ಕಾರ್ಯಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿ ಎಂದು ಹೇಳಿಕೊಂಡು, ವಂಚಿಸುತ್ತಿದ್ದ ಗುಜರಾತ್ ಮೂಲದ ಕಿರಣ್ ಜೆ ಪಟೇಲ್ (Conman Kiran Patel) ಎಂಬಾತನನ್ನು ಶ್ರೀನಗರದ ಪಂಚತಾರಾ ಹೋಟೆಲ್ನಲ್ಲಿ ಪೊಲೀಸರು ವಾರದ ಹಿಂದೆ ಬಂಧಿಸಿದ್ದರು. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಈಗ ಮತ್ತೊಂದು ಬೆಳವಣಿಗೆಯಾಗಿದೆ. ಈ ಕಿರಣ್ ಜೆ ಪಟೇಲ್ ವಂಚನೆಯಲ್ಲಿ ಪಾಲುದಾರನಾದ ಅಮಿತ್ ಪಾಂಡ್ಯಾ ಎಂಬಾತನ ತಂದೆ ಹಿತೇಶ್ ಪಾಂಡ್ಯಾ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಯಾಗಿದ್ದ ಹಿತೇಶ್ ಪಾಂಡ್ಯಾ, ತಮ್ಮ ಪುತ್ರನ ವಂಚನೆಯ ಕಾರಣಕ್ಕೇ ಉದ್ಯೋಗಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿದೆ.
ಗುಜರಾತ್ನ ಕಿರಣ್ ಜೆ ಪಟೇಲ್ ಕಾಶ್ಮೀರದಲ್ಲಿರುವ ಹಲವು ಪ್ರವಾಸಿ ತಾಣಗಳಿಗೆ ಭೇಟಿಕೊಟ್ಟಿದ್ದ. ತಾನು ಪ್ರಧಾನಿ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದೇನೆ. ಕೇಂದ್ರ ಸರ್ಕಾರ ವತಿಯಿಂದ ಪ್ರವಾಸಿ ತಾಣಗಳ ಹೋಟೆಲ್ ವ್ಯವಸ್ಥೆಯನ್ನು ಪರಿಶೀಲಿಸಲು ಬಂದಿದ್ದೇನೆ ಎನ್ನುತ್ತಿದ್ದ. ಅದೆಷ್ಟರ ಮಟ್ಟಿಗೆ ವಂಚಿಸಿದ್ದ ಎಂದರೆ, ಈ ವ್ಯಕ್ತಿ ಜಮ್ಮು-ಕಾಶ್ಮೀರದ ಭೇಟಿ ವೇಳೆ ಝಡ್ ಪ್ಲಸ್ ಭದ್ರತೆ ಪಡೆದಿದ್ದ. ಬುಲೆಟ್ಪ್ರೂಫ್ ಎಸ್ಯುವಿ ಮತ್ತು ಜಮ್ಮು-ಕಾಶ್ಮಿರದ ಫೈವ್ ಸ್ಟಾರ್ ಹೋಟೆಲ್ನಲ್ಲಿ ವಸತಿ ವ್ಯವಸ್ಥೆ ಸಿಕ್ಕಿತ್ತು. ಸರ್ಕಾರದ ಹಣದಲ್ಲಿ ಭರ್ಜರಿ ಎಂಜಾಯ್ ಮಾಡುತ್ತಿದ್ದ. ಇವನು ತಾನು ಹೋದ ಸ್ಥಳಗಳ ಫೋಟೋ ಹಾಕುತ್ತಿದ್ದ. ಅವನ ಅಕ್ಕಪಕ್ಕದಲ್ಲಿ ಭದ್ರತಾ ಸಿಬ್ಬಂದಿ ಇರುತ್ತಿದ್ದರು. ಟ್ವಿಟರ್ ಅಕೌಂಟ್ ಕೂಡ ವೆರಿಫಿಕೇಶನ್ ಆಗಿತ್ತು. ಆದರೂ ಕೆಲವು ನಡೆಗಳು ಅನುಮಾನಾಸ್ಪದವಾಗಿ ಇದ್ದಿದ್ದರಿಂದ ಜಮ್ಮು-ಕಾಶ್ಮೀರ ಸಿಐಡಿ ತನಿಖೆ ಕೈಗೆತ್ತಿಕೊಂಡು, ಅಂತಿಮವಾಗಿ ವಂಚಕನನ್ನು ಬಂಧಿಸಲಾಗಿತ್ತು. ಹೀಗೆ ಕಿರಣ್ ಪಟೇಲ್ ತನ್ನದೇ ಆದ ಒಂದು ನಕಲಿ ಅಧಿಕಾರಿಗಳ ತಂಡವನ್ನು ರಚಿಸಿಕೊಂಡಿದ್ದ. ಆ ನಕಲಿ ಅಧಿಕಾರಿಗಳ ತಂಡದಲ್ಲಿ ಅಮಿತ್ ಪಾಂಡ್ಯಾ ಕೂಡ ಇದ್ದ. ಈಗ ಮಗ ಮಾಡಿದ ತಪ್ಪಿಗೆ ಅಪ್ಪ ಹಿತೇಶ್ ಪಾಂಡ್ಯಾ ಬೆಲೆ ತೆತ್ತಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಕಾರ್ಯಾಲಯದ ಅಧಿಕಾರಿಯೆಂದು ಕಾಶ್ಮೀರದಲ್ಲಿ ಝಡ್ ಪ್ಲಸ್ ಭದ್ರತೆ ಪಡೆದಿದ್ದವ ಅರೆಸ್ಟ್; ಇವನೆಂಥಾ ಸ್ಮಾರ್ಟ್ ವಂಚಕ!
ಹಿತೇಶ್ ಪಾಂಡ್ಯಾ ಅವರು ಗುಜರಾತ್ ಮುಖ್ಯಮಂತ್ರಿ ಕಾರ್ಯಾಲಯದಲ್ಲಿ 2001ರಿಂದಲೂ ಸಾರ್ವಜನಿಕ ಸಂಪರ್ಕ ಅಧಿಕಾರಿ (PRO)ಆಗಿ ಕೆಲಸ ಮಾಡುತ್ತಿದ್ದರು. ಮಾ.24ರಂದು ಸಂಜೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ‘ಕಿರಣ್ ಪಟೇಲ್ ವಂಚನೆ ಪ್ರಕರಣದಲ್ಲಿ ನನ್ನ ಮಗ ಖಂಡಿತವಾಗಿಯೂ ತಪ್ಪು ಮಾಡಿಲ್ಲ. ಅವನೊಬ್ಬ ಅಮಾಯಕ. ಹಾಗಿದ್ದಾಗ್ಯೂ ಅವನ ಹೆಸರು ಕೇಳಿಬಂದಿದೆ. ಪ್ರಧಾನಿ ಕಾರ್ಯಾಲಯ ಮತ್ತು ಗುಜರಾತ್ ಮುಖ್ಯಮಂತ್ರಿ ಕಚೇರಿಗೆ ಕಳಂಕ ತರಲು ನನಗೆ ಇಷ್ಟವಿಲ್ಲ. ಹೀಗಾಗಿ ರಾಜೀನಾಮೆ ಕೊಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಕಿರಣ್ ಪಟೇಲ್ ಜಮ್ಮು-ಕಾಶ್ಮೀರಕ್ಕೆ ಹೋಗಿದ್ದಾಗ ಪಂಚತಾರಾ ಹೋಟೆಲ್ನಲ್ಲಿ ಉಳಿದು, ಐಷಾರಾಮಿ ಸೌಕರ್ಯ ಪಡೆದಿದ್ದ. ಅವನೊಂದಿಗೆ ಈ ಅಮಿತ್ ಹಿತೇಶ್ ಪಾಂಡ್ಯಾ, ಜಯ ಸೀತಾಪಾರಾ ಮತ್ತು ರಾಜಸ್ಥಾನದ ತ್ರಿಲೋಕ್ ಸಿಂಗ್ ಕೂಡ ಇದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಇವರನ್ನೂ ಕೂಡ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.