ನವ ದೆಹಲಿ: ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿ ಪಾತ್ರವೇನೂ ಇಲ್ಲ ಎಂದು ಸುಪ್ರೀಂಕೋರ್ಟ್ ಕ್ಲೀನ್ ಚಿಟ್ಟ ಕೊಟ್ಟ ಬೆನ್ನಲ್ಲೇ ಬಂಧಿತರಾದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಹೆಸರೀಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಅವರು ಕಾಂಗ್ರೆಸ್‌ನೊಂದಿಗೆ ಸೇರಿಕೊಂಡು ಅಂದಿನ ಗುಜರಾತ್ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದ್ದರು ಎಂದು ಗುಜರಾತ್ ಪೊಲೀಸರ ವಿಶೇಷ ತನಿಖಾ ದಳ (SIT) ಇಂದು ಕೋರ್ಟ್‌ಗೆ ಅಫಿಡಿವಿಟ್ ಸಲ್ಲಿಸಿದೆ. ಅಷ್ಟೇ ಅಲ್ಲ, ತೀಸ್ತಾ ಸೆಟಲ್ವಾಡ್‌ರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಕೋರ್ಟ್‌ಗೆ ಹೇಳಿದೆ. ಇನ್ನೊಂದು ಮುಖ್ಯ ಅಂಶವೆಂದರೆ, ʼಸರ್ಕಾರ ಅಸ್ಥಿರಗೊಳಿಸುವ ಪಿತೂರಿಗೆ ಕೈಜೋಡಿಸಿದ್ದ ತೀಸ್ತಾಗೆ ಅಂದು ಕೇಂದ್ರದಲ್ಲಿದ್ದ ಸರ್ಕಾರ ಪದ್ಮ ಪ್ರಶಸ್ತಿಯ ಆಮಿಷವನ್ನೂ ಒಡ್ಡಿತ್ತು. ಅದರಂತೆ 2007ರಲ್ಲಿ ತೀಸ್ತಾರಿಗೆ ಪದ್ಮಶ್ರೀ ಪುರಸ್ಕಾರ ದೊರೆತಿದೆʼ ಎಂಬುದನ್ನು ಎಸ್‌ಐಟಿ ತಿಳಿಸಿದೆ.
2002ರ ಗುಜರಾತ್ ಗಲಭೆಯಲ್ಲಿ, ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಸೇರಿ ಇನ್ನಿತರ ಬಿಜೆಪಿ ನಾಯಕರನ್ನು ಸಿಲುಕಿಸಲು ತೀಸ್ತಾ ಸೆಟಲ್ವಾಡ್ ಪ್ರಯತ್ನ ಮಾಡಿದ್ದರು ಎಂಬ ಆರೋಪ ಎದ್ದಿದೆ. ಬರೀ ಇವರಷ್ಟೇ ಅಲ್ಲ, ಮಾಜಿ ಪೊಲೀಸ್ ಅಧಿಕಾರಿಗಳಾದ ಆರ್.ಬಿ.ಶ್ರೀಕುಮಾರ್ ಮತ್ತು ಸಂಜೀವ್ ಭಟ್ ಅವರೂ ಈ ಸಂಚಿನಲ್ಲಿ ಪಾಲುದಾರರು ಎಂದು ಹೇಳಲಾಗಿದ್ದು, ಇವರಲ್ಲಿ ತೀಸ್ತಾ ಮತ್ತು ಶ್ರೀಕುಮಾರ್‌ರನ್ನು ಜೂನ್ ತಿಂಗಳಲ್ಲಿ ಬಂಧಿಸಲಾಗಿದೆ. ಇವರಲ್ಲಿ ಸಂಜೀವ್ ಭಟ್ ಬೇರೆ ಕೇಸ್‌ವೊಂದರಲ್ಲಿ ಜೈಲಿನಲ್ಲಿ ಇದ್ದಾರೆ. ಇದೀಗ ಈ ಮೂವರನ್ನೂ ಎಸ್‌ಐಟಿ ತೀವ್ರ ವಿಚಾರಣೆಗೆ ಒಳಪಡಿಸಿದೆ.
ಇದನ್ನೂ ಓದಿ: ಗುಜರಾತ್ ಗಲಭೆ: ನರೇಂದ್ರ ಮೋದಿ ವಿರುದ್ಧದ ಪಿತೂರಿಯ ಶಿಲ್ಪಿ ಸೋನಿಯಾ ಗಾಂಧಿ ಎಂದ ಬಿಜೆಪಿ
ಇಲ್ಲಿಯವರೆಗೆ ನಡೆದ ತನಿಖೆಯ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ ಎಸ್‌ಐಟಿ, ʼಗಲಭೆಯನ್ನೇ ಮುಖ್ಯವಾಗಿಟ್ಟುಕೊಂಡು ಅಂದಿನ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನ ನಡೆದಿದ್ದು ಪ್ರಮುಖ ರಾಜಕೀಯ ಪಕ್ಷವೊಂದರ ಸಹಾಯದಿಂದʼ ಎಂದು ಉಲ್ಲೇಖಿಸಿದೆ. ಎಸ್‌ಐಟಿ ಇಂದಿನ ತಮ್ಮ ವರದಿಯಲ್ಲಿ ಅಹ್ಮದ್ ಪಟೇಲ್ ಹೆಸರನ್ನು ಬಹುಮುಖ್ಯವಾಗಿ ತೋರಿಸಿದೆ. ʼಗೋದ್ರಾ ರೈಲು ದುರಂತ ನಡೆದ ಕೆಲವೇ ದಿನಗಳ ಬಳಿಕ ಅಹ್ಮದ್ ಪಟೇಲ್ ಮತ್ತು ತೀಸ್ತಾ ಸೆಟಲ್ವಾಡ್ ಭೇಟಿಯಾಗಿದ್ದಾರೆ. ಆಗ ಸಮಯದಲ್ಲಿ ತೀಸ್ತಾರಿಗೆ 5 ಲಕ್ಷ ರೂಪಾಯಿ ನೀಡಲಾಗಿತ್ತು. ಅದಾದ ಎರಡೇ ದಿನಗಳಲ್ಲಿ ಶಾಹೀನ್‌ಬಾಗ್‌ನಲ್ಲಿರುವ ಸರ್ಕಾರಿ ಸರ್ಕಿಟ್ ಹೌಸ್‌ನಲ್ಲಿ ಅಹ್ಮದ್ ಪಟೇಲ್ ಮತ್ತು ತೀಸ್ತಾ ಸೆಟಲ್ವಾಡ್ ಮತ್ತೊಮ್ಮೆ ಭೇಟಿಯಾದರು. ಆಗ ತೀಸ್ತಾರಿಗೆ 25 ಲಕ್ಷ ರೂಪಾಯಿ ಹಸ್ತಾಂತರ ಮಾಡಲಾಯಿತು. ಹಾಗೇ, ಹಣಕೊಟ್ಟವರೇ ನಮಗೆ ಸಾಕ್ಷಿ ಹೇಳಿದ್ದಾರೆ. ಅಷ್ಟೇ ಅಲ್ಲ, ಅಹ್ಮದ್ ಪಟೇಲ್ ಸೂಚನೆ ಮೇರೆಗೇ ಹಣ ನೀಡಲಾಯಿತು ಎಂದೂ ತಿಳಿಸಿದ್ದಾರೆʼ ಎಂದು ಎಸ್‌ಐಟಿ ವರದಿ ಹೇಳಿದೆ.
ʼಗುಜರಾತ್ ಗಲಭೆಯಲ್ಲಿ ಸಂತ್ರಸ್ತರಾದವರಿಗೆ ತಾವು ಪರಿಹಾರ ಒದಗಿಸುತ್ತಿರುವಂತೆ ತೀಸ್ತಾ ಸೆಟಲ್ವಾಡ್ ಬಿಂಬಿಸಿಕೊಂಡಿದ್ದರು. ತಾವು ರಾಜಕೀಯ ಮುಖಂಡರು, ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವುದೂ ಅದೇ ಕಾರಣಕ್ಕಾಗಿ ಎಂದೇ ಹೇಳುತ್ತಿದ್ದರು. ಆದರೆ ವಾಸ್ತವದಲ್ಲಿ ಎಲ್ಲ ಸೇರಿ ಮಾಡುತ್ತಿದ್ದುದು, ಸರ್ಕಾರ ಪತನಗೊಳಿಸುವ ಪಿತೂರಿಯನ್ನಾಗಿತ್ತು. ಇವರ್ಯಾರೂ ಯಾವುದೇ ಪರಿಹಾರ ಸಾಮಗ್ರಿಗಳು, ನೆರವನ್ನೂ ಸಂತ್ರಸ್ತರಿಗೆ ನೀಡಿಲ್ಲ. ಅದನ್ನೆಲ್ಲ ಅಂದು ಗುಜರಾತ್ ಸರ್ಕಾರ ರಚಿಸಿದ್ದ ಗುಜರಾತ್ ಪರಿಹಾರ ಸಮಿತಿಯೇ ಒದಗಿಸಿದೆ. ಅದರಲ್ಲೂ ಇನ್ನೊಬ್ಬರು ಸಾಕ್ಷಿದಾರರು ಹೇಳಿದ ಮಾತು ಕೇಳಿ ನಮಗೇ ಅಚ್ಚರಿಯಾಗಿದೆ. ದಂಗೆಯ ಸಮಯದಲ್ಲಿ ತೀಸ್ತಾ ಸೆಟಲ್ವಾಡ್ ಮಾಡಿದ್ದ ಪಿತೂರಿಯನ್ನು ಮುಚ್ಚಿಹಾಕಲು, ಆಕೆ ಮಾಡಿದ್ದೆಲ್ಲ ಸಮಾಜ ಸೇವೆ, ಸಂತ್ರಸ್ತರ ಸೇವೆ ಎಂದು ಬಿಂಬಿಸಲು 2007ರಲ್ಲಿ ಯುಪಿಎ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿದೆ ಎಂದು ಆ ಸಾಕ್ಷಿದಾರರು ತಿಳಿಸಿದ್ದಾರೆʼ ಎಂದು ಎಸ್‌ಐಟಿ ಹೇಳಿದೆ.
ಇದನ್ನೂ ಓದಿ: ತೀಸ್ತಾ ಸೆಟಲ್ವಾಡ್ ಕೇಸ್‌ನಲ್ಲಿ ಅಹ್ಮದ್ ಪಟೇಲ್ ಹೆಸರು; ಪ್ರಶ್ನೆಯೊಂದನ್ನು ಕೇಳಿದ ಪುತ್ರಿ ಮುಮ್ತಾಜ್ ಪಟೇಲ್