ನವ ದೆಹಲಿ: ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ನವೆಂಬರ್ 12ರಂದು ನಡೆಯಲಿದೆ. ಚುನಾವಣೆಗೆ ನಾಲ್ಕೇ ದಿನ ಬಾಕಿ ಇರುವಾಗ ಕಾಂಗ್ರೆಸ್ಗೆ ಬಹುದೊಡ್ಡ ಹಿನ್ನಡೆಯಾಗಿದೆ. ಅಲ್ಲಿನ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್ ಠಾಕೂರ್ ಖಾಂಡ್ ಸೇರಿ ಒಟ್ಟು 26 ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮತ್ತು ಶಿಮ್ಲಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜಯ್ ಸೂದ್, ಬಿಜೆಪಿ ನಾಯಕ ಸುಧಾನ್ ಸಿಂಗ್ ಸಮ್ಮುಖದಲ್ಲಿ 26 ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿದ್ದಾರೆ.
ಒಂದೆಡೆ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಪಕ್ಷಸಂಘಟನೆ, ತಳಮಟ್ಟದಿಂದ ಪಕ್ಷವನ್ನು ಬಲಪಡಿಸುವ ಸಲುವಾಗಿಯೇ ಈ ಯಾತ್ರೆ ನಡೆಯುತ್ತಿದೆ. ಆದರೆ ಆ ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇನ್ನು ಹಿಮಾಚಲ ಪ್ರದೇಶ ಚುನಾವಣೆಗೆ ಬಿಜೆಪಿ ಭರದಿಂದ ಸಿದ್ಧತೆ ನಡೆಸುತ್ತಿದೆ. ಹಾಗೇ, ಆಮ್ ಆದ್ಮಿ ಪಕ್ಷವೂ ಚುನಾವಣಾ ಕಣಕ್ಕೆ ಧುಮುಕಿದೆ. ಈ ಮಧ್ಯೆ ಕಾಂಗ್ರೆಸ್ನಿಂದ ಇಷ್ಟೊಂದು ಸಂಖ್ಯೆಯಲ್ಲಿ ಪ್ರಮುಖರು ಬಿಜೆಪಿ ಸೇರಿದ್ದು ಆ ಪಕ್ಷಕ್ಕೆ ಎದುರಾದ ದೊಡ್ಡ ಆಘಾತ ಎನ್ನಿಸಿದೆ.
ಇನ್ನು ಕಾಂಗ್ರೆಸ್ ನಾಯಕರನ್ನು ಬರಮಾಡಿಕೊಂಡ ಬಳಿಕ ಟ್ವೀಟ್ ಮಾಡಿದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ‘ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ತಂದುಕೊಡಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ’ ಎಂದು ಹೇಳಿದರು.
ಇದನ್ನೂ ಓದಿ: Opinion Poll | ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿಗೇ ಅಧಿಕಾರ? ಸಮೀಕ್ಷೆ ಹೇಳುವುದೇನು?