ಮುಂಬೈ: ಖಾಸಗಿಯಾಗಿ ಲೈಂಗಿಕ ಕೆಲಸ (Sex Worker) ಮಾಡುವುದನ್ನು ಅಪರಾಧ ಎನ್ನಲಾಗದು ಎಂದು ವಾಣಿಜ್ಯ ನಗರಿ ಮುಂಬೈನ ಸೆಷನ್ ನ್ಯಾಯಾಲಯವು ಹೇಳಿದೆ. ಹಾಗೆಯೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಅದು ರದ್ದು ಮಾಡಿದ್ದು, 34 ವರ್ಷದ ಮಹಿಳೆಯನ್ನು ರಿಮಾಂಡ್ ಹೋಮ್‌ನಿಂದ ಮುಕ್ತಗೊಳಿಸಿದೆ.
ಮಾರ್ಚ್ 15ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಲೈಂಗಿಕ ಕಾರ್ಯಕರ್ತರೊಬ್ಬರಿಗೆ ರಿಮಾಂಡ್ ಹೋಮ್‌ನಲ್ಲಿ ಒಂದು ವರ್ಷ ಇರಿಸುವಂತೆ ತೀರ್ಪು ನೀಡಿತ್ತು. ಮುಲಂದ್ ಪ್ರದೇಶದಲ್ಲಿನ ವೇಶ್ಯಾವಾಟಿಕೆ ಮನೆಯಲ್ಲಿ ಆಕೆ ಇದ್ದಿದ್ದರಿಂದಾಗಿ ಈ ಶಿಕ್ಷೆ ನೀಡಲಾಗಿತ್ತು. ಆದರೆ ಆಕೆ ತೀರ್ಪನ್ನು ಪ್ರಶ್ನಿಸಿ ಸೆಷನ್ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯ ಆಕೆಯ ಪರವಾಗಿ ತೀರ್ಪು ನೀಡಿದೆ.
ಇದನ್ನೂ ಓದಿ: IPL 2023: ಲಕ್ನೋ-ಮುಂಬೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡಗಳ ಮಾಹಿತಿ
“ವೇಶ್ಯಾವಾಟಿಕೆಯನ್ನು ಸಾರ್ವಜನಿಕ ಸ್ಥಳದಲ್ಲಿ ಮಾಡಿ, ಬೇರೆಯವರಿಗೆ ತೊಂದರೆಯನ್ನುಂಟುಮಾಡಿದರೆ ಮಾತ್ರ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಮಹಿಳೆ ವೇಶ್ಯಾವಾಟಿಕೆ ಸ್ಥಳದಲ್ಲಿ ಇದ್ದಳು ಎನ್ನುವ ಕಾರಣಕ್ಕೇ ಆಕೆಯ ಮೇಲೆ ಶಿಕ್ಷೆ ಹೊರಿಸಲಾಗಿದೆ. ಆಕೆ ಸಾರ್ವಜನಿಕವಾಗಿ ವೇಶ್ಯಾವಾಟಿಕೆ ಮಾಡಿದ್ದಾಳೆ ಎನ್ನುವುದಕ್ಕೆ ಪುರಾವೆಗಳಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಆರೋಪಿತ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಇದೀಗ ಶಿಕ್ಷೆ ನೀಡಿ ಆಕೆಯನ್ನು ರಿಮಾಂಡ್ ಹೋಮ್‌ನಲ್ಲಿ ಒಂದು ವರ್ಷ ಇರಿಸಿದರೆ ಆಕೆಯ ಹಕ್ಕನ್ನು ಕಿತ್ತುಕೊಂಡಂತಾಗುತ್ತದೆ. ಆಕೆಗೆ ಮುಕ್ತವಾಗಿ ಓಡಾಡುವ ಹಕ್ಕಿದೆ. ತಪ್ಪು ಮಾಡಿದಾಗ ಮಾತ್ರ ಶಿಕ್ಷೆ ವಿಧಿಸಬಹುದು ಎಂದು ನ್ಯಾಯಾಲಯ ಹೇಳಿದೆ.