Site icon Vistara News

ಹರಿಯಾಣ ಕ್ರೀಡಾ ಸಚಿವ ಸಂದೀಪ್​ ಸಿಂಗ್​ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್​ ದಾಖಲು; ಮಹಿಳಾ ಕೋಚ್​​​ರಿಂದ ದೂರು

Sexual Harassment Case Against Haryana Sports Minister Sandeep Singh

ಹರಿಯಾಣ ಕ್ರೀಡಾ ಸಚಿವ ಸಂದೀಪ್​ ಸಿಂಗ್​ ವಿರುದ್ಧ ಚಂಡಿಗಢ ಪೊಲೀಸರು ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್​ ಕೇಸ್​ ದಾಖಲಿಸಿದ್ದಾರೆ. ಜ್ಯೂನಿಯರ್ ಅಥ್ಲೆಟಿಕ್ಸ್​ ಮಹಿಳಾ ಕೋಚ್​ (ಮಹಿಳಾ ತರಬೇತಿದಾರರು)ವೊಬ್ಬರು ಸಚಿವರ ವಿರುದ್ಧ ಪೊಲೀಸರಿಗೆ ದೂರು ನೀಡಿ, ‘ನಾನು ಕ್ರೀಡಾ ಸಚಿವರ ಚಂಡಿಗಢ್​​ನಲ್ಲಿರುವ ನಿವಾಸಕ್ಕೆ ಕಾರ್ಯ ನಿಮಿತ್ತ ಹೋಗಿದ್ದಾಗ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಆರೋಪಿಸಿದ್ದಾರೆ.

ಕ್ರೀಡಾ ಸಚಿವ ಸಂದೀಪ್​ ಸಿಂಗ್​ ಅವರು ಕುರುಕ್ಷೇತ್ರದ ಪೆಹೋವಾ ವಿಧಾನಸಭಾ ಕ್ಷೇತ್ರದಿಂದ ಗೆದ್ದವರು. ಹಾಕಿ ಆಟಗಾರರಾಗಿದ್ದು, 2004-2012ರವರೆಗೆ ಭಾರತೀಯ ಹಾಕಿ ತಂಡದಲ್ಲಿ ಆಟವಾಡಿದ್ದಾರೆ. ಹಾಗೇ, ಭಾರತೀಯ ಹಾಕಿ ತಂಡದ ಕ್ಯಾಪ್ಟನ್​ ಕೂಡ ಆಗಿದ್ದರು. 2019ರಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾಗಿ, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಕ್ರೀಡಾ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು.

ಇದೀಗ ಈ ಮಹಿಳಾ ಕೋಚ್​​ ಕ್ರೀಡಾ ಸಚಿವರ ವಿರುದ್ಧ ಗಂಭೀರ ಆರೋಪವನ್ನೇ ಮಾಡಿದ್ದಾರೆ. ಶುಕ್ರವಾರ ಅವರು ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗಳಾದ ಮನಿಶಾ ಚೌಧರಿ ಮತ್ತು ಶ್ರುತಿ ಅರೋರಾ ಅವರನ್ನು ಭೇಟಿ ಮಾಡಿ, ದೂರು ದಾಖಲಿಸಿದ್ದಾರೆ. ‘ನನಗೆ ಚಂಡಿಗಢ ಪೊಲೀಸರ ಮೇಲೆ ಸಂಪೂರ್ಣ ನಂಬಿಕೆಯಿದೆ’ ಎಂದಿದ್ದಾರೆ. ಅಂದಹಾಗೇ, ಈ ಮಹಿಳೆ 2016ರಲ್ಲಿ ನಡೆದ ರಿಯೊ ಒಲಿಂಪಿಕ್ಸ್​​ನಲ್ಲಿ ಭಾಗವಹಿಸಿದ್ದರು. ಬಳಿಕ ಇದೇ ವರ್ಷ ಸೆಪ್ಟೆಂಬರ್​ನಲ್ಲಿ ಕೇಂದ್ರ ಸರ್ಕಾರದ ಅತ್ಯುತ್ತಮ ಕ್ರೀಡಾಪಟು ಯೋಜನೆಯಡಿ ಜ್ಯೂನಿಯರ್​ ಕೋಚ್​ ಆಗಿ ನೇಮಕಗೊಂಡಿದ್ದರು. ಈ ಮಧ್ಯೆ ಹರಿಯಾಣ ಕ್ರೀಡಾ ಸಚಿವರು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ಈ ಬಗ್ಗೆ ಸ್ವತಂತ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Hacker Arrested | ಅಮೆರಿಕ ಮಹಿಳೆಯಿಂದ ಸುಪಾರಿ ಪಡೆದು ಹರಿಯಾಣ ಮಹಿಳೆಯ ಮೊಬೈಲ್‌ ಹ್ಯಾಕ್, ಚಾರಿತ್ರ್ಯ ವಧೆ! ಆರೋಪಿ ಕರ್ನಾಟಕದವನು!

Exit mobile version