ಭೋಪಾಲ್: ದೇಶದಲ್ಲಿ ಮತ್ತೆ “ಟುಕ್ಡೆ ಟುಕ್ಡೆ ಗ್ಯಾಂಗ್” (Tukde Tukde Gang) ಹೇಳಿಕೆಯ ವಿವಾದ ಸದ್ದು ಮಾಡುತ್ತಿದೆ. ಬಾಲಿವುಡ್ ನಟರಾದ ಶಬಾನಾ ಅಜ್ಮಿ (Shabana Azmi), ನಾಸಿರುದ್ದೀನ್ ಶಾ (Naseeruddin Shah) ಹಾಗೂ ಗೀತ ರಚನೆಕಾರ ಜಾವೇದ್ ಅಖ್ತರ್ (Javed Akhtar) ಅವರು “ಟುಕ್ಡೆ ಟುಕ್ಡೆ ಗ್ಯಾಂಗ್”ನ ಏಜೆಂಟರು ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ (Narottam Mishra) ಆರೊಪಿಸಿದ್ದಾರೆ.
“ಶಬಾನಾ ಅಜ್ಮಿ, ನಾಸಿರುದ್ದೀನ್ ಶಾ ಅಂತಹವರು ಟುಕ್ಡೆ ಟುಕ್ಡೆ ಗ್ಯಾಂಗ್‌ನ ಸ್ಲೀಪರ್ ಸೆಲ್‌ಗಳಾಗಿ ಕಾರ್ಯನಿರ್ವಹಿಸುತ್ತಾರೆ. ಇವರು ಕೇವಲ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಾತ್ರ ಗದ್ದಲ ಸೃಷ್ಟಿಸುತ್ತಾರೆ. ಅಂತಹ ಗ್ಯಾಂಗ್‌ನ ಏಜೆಂಟರಂತೆ ಅಜ್ಮಿ, ನಾಸೀರುದ್ದೀನ್ ಕೆಲಸ ಮಾಡುತ್ತಾರೆ. ಹಾಗೆಯೇ, ಇವರು ರಾಜಸ್ಥಾನ, ಜಾರ್ಖಂಡ್‌ನಂತಹ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ನಡೆಯುವ ವಿಷಯಗಳ ಕುರಿತು ಮಗುಮ್ಮಾಗಿ ಇರುತ್ತಾರೆ. ಇಂತಹವರ ಬಣ್ಣ ಈಗ ಬಯಲಾಗುತ್ತಿದೆ” ಎಂದು ಹೇಳಿದ್ದಾರೆ.
ಬಿಲ್ಕಿಸ್ ಬಾನೊ ಅತ್ಯಾಚಾರಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿದ್ದಾಗ ಅಜ್ಮಿ ಅವರು ಖಂಡನೆ ವ್ಯಕ್ತಪಡಿಸಿದ್ದರು. ಇದರ ಕುರಿತು ಪ್ರತಿಕ್ರಿಯಿಸಿದ ಮಿಶ್ರಾ, “ರಾಜಸ್ಥಾನದಲ್ಲಿ ಕನ್ಹಯ್ಯ ಲಾಲ್ ಹತ್ಯೆಯಾದಾಗ, ಜಾರ್ಖಂಡ್‌ನಲ್ಲಿ ಯುವತಿಯನ್ನು ಜೀವಂತ ಸುಟ್ಟಾಗ ಅಜ್ಮಿ, ನಾಸಿರುದ್ದೀನ್ ಅಂತಹವರು ಮಾತನಾಡುವುದಿಲ್ಲ. ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಸಣ್ಣ ಘಟನೆ ನಡೆದರೂ, ನಾಸೀರುದ್ದೀನ್ ಶಾ ಅವರು ನನಗೆ ದೇಶದಲ್ಲಿ ಇರಲು ಭಯವಾಗುತ್ತದೆ ಎನ್ನುತ್ತಾರೆ. ಆಗ, ಪ್ರಶಸ್ತಿ ವಾಪ್ಸಿ ಗ್ಯಾಂಗ್ ಕೂಗಾಟ ಆರಂಭಿಸುತ್ತದೆ” ಎಂದಿದ್ದಾರೆ.
ಇದನ್ನೂ ಓದಿ | Bhopal mall | ಭೋಪಾಲ್ ಮಾಲ್‌ನಲ್ಲಿ ನಮಾಜ್ ಪ್ರತಿಭಟಿಸಿ, ಬಲಪಂಥೀಯ ಸಂಘಟನೆಗಳಿಂದ ಭಜನೆ