ದೆಹಲಿಯ ಶಹಬಾದ್ ಡೇರಿ ಪ್ರದೇಶದಲ್ಲಿ ಕಳೆದ ತಿಂಗಳು ಅಂದರೆ ಮೇ 28ರಂದು 16ವರ್ಷದ ಹಿಂದು ಬಾಲಕಿಯನ್ನು ಸಾಹಿಲ್ ಎಂಬ ಮುಸ್ಲಿಂ ಯುವಕ 21 ಬಾರಿ ಇರಿದು ಕೊಂದಿದ್ದ (Shahbad Dairy Murder Case). ಆಕೆಯ ಮೈಮೇಲೆ 34 ಗಾಯಗಳಾಗಿದ್ದು, ಶವಪರೀಕ್ಷೆ ವೇಳೆ ಪತ್ತೆಯಾಗಿತ್ತು. ಹಿಂದು ಬಾಲಕಿಯ ಈ ಹತ್ಯೆ ದೇಶವನ್ನೇ ಬೆಚ್ಚಿಬೀಳಿಸಿತ್ತು. ಆರೋಪಿ ಸಾಹಿಲ್‌ನನ್ನು ಪೊಲೀಸರು ಮೇ 29ರಂದು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಸದ್ಯ ದೆಹಲಿ ಪೊಲೀಸರು (Delhi Police)ಸಾಹಿಲ್ ವಿರುದ್ಧ ಪೋಕ್ಸೊ ನ್ಯಾಯಾಲಯದಲ್ಲಿ 640 ಪುಟಗಳ ಸುದೀರ್ಘ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಆರೋಪಿಗೆ ಮರಣದಂಡನೆ ವಿಧಿಸುವಂತೆ ಮನವಿ ಸಲ್ಲಿಸಿದ್ದಾರೆ.
‘ಈ ಹುಡುಗಿಯ ಹತ್ಯೆಯನ್ನು ಸರಿಯಾಗಿ ಯೋಜನೆ ರೂಪಿಸಿ ಹತ್ಯೆ ಮಾಡಲಾಗಿದೆ. ಆಕೆಯ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿಯೇ ಕೊಲ್ಲಲಾಗಿದೆ. ಸಾಹಿಲ್ ಆ ಹುಡುಗಿಯನ್ನು ಹೇಗೆಲ್ಲ ಪ್ಲ್ಯಾನ್ ಮಾಡಿ ಹತ್ಯೆ ಮಾಡಿದ ಎಂಬುದಕ್ಕೆ ನಮ್ಮ ಬಳಿ ಸಂಪೂರ್ಣ ಸಾಕ್ಷಿಯಿದೆ. ಘಟನೆ ನಡೆದ ತಿಂಗಳ ಒಳಗೇ ನಾವು ಚಾರ್ಜ್ಶೀಟ್ ಸಲ್ಲಿಸುತ್ತಿದ್ದೇವೆ. ಆರೋಪಿಗೆ ಮರಣ ದಂಡನೆ ವಿಧಿಸುವ ಮೂಲಕ ಬಾಲಕಿಯ ಸಾವಿಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ದೆಹಲಿ ಕಾನೂನು ಮತ್ತು ಸುವ್ಯವಸ್ಥೆ ವಿಶೇಷ ಆಯುಕ್ತ ದೀಪೇಂದ್ರ ಪಾಠಕ್ ಹೇಳಿದ್ದಾರೆ.
ಇದನ್ನೂ ಓದಿ: Delhi Murder: ಸಾಹಿಲ್‌ನನ್ನು ನೋಡೇ ಇಲ್ಲ, ನನ್ನ ಮಗಳಿಗೆ ನ್ಯಾಯ ಕೊಡಿಸಿ; ಹತ್ಯೆಗೀಡಾದ ಹಿಂದು ಬಾಲಕಿ ಪೋಷಕರ ಆಗ್ರಹ
ದೆಹಲಿಯ ಉತ್ತರ ರೋಹಿಣಿ ಪ್ರದೇಶದ ಶಹಬಾದ್ ಡೇರಿ ಎಂಬಲ್ಲಿ ಬಾಲಕಿ ಸಾಕ್ಷಿಯನ್ನು ಸಾಹಿಲ್ ಕೊಂದಿದ್ದ. ಬಾಲಕಿ ಸಾಕ್ಷಿಯನ್ನು ಕೊಂದ ಮೊಹಮ್ಮದ್ ಸಾಹಿಲ್ ತಕ್ಷಣವೇ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಸ್ಥಳದಿಂದ ಪರಾರಿಯಾಗಿದ್ದ. ಅದಾದ ಮೇಲೆ ಬಸ್ ಹತ್ತಿ ಉತ್ತರಪ್ರದೇಶದ ಬುಲಾಂದ್ಶಹರ್ಗೆ ತೆರಳಿದ್ದ. ಆದರೆ ಪೊಲೀಸರೂ ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿ ಇರುವ ಜಾಗವನ್ನು ಪತ್ತೆ ಹಚ್ಚಿದ್ದರು. ದೆಹಲಿಯಲ್ಲಿರುವ ಸಾಹಿಲ್ ಮೊಹಮ್ಮದ್ ಮನೆಗೆ ಹೋಗಿ, ಆತನ ಅಪ್ಪನನ್ನೂ ಕರೆದುಕೊಂಡು ಉತ್ತರ ಪ್ರದೇಶದ ಬುಲಾಂದ್ಶಹರ್ಗೆ ಹೋಗಿ ಸಾಹಿಲ್‌ನನ್ನು ಬಂಧಿಸಿದ್ದರು. ಈತ ಸಾಕ್ಷಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆಕೆಗೆ 21 ಬಾರಿ ಇರಿದಿದ್ದ, ಕಲ್ಲಿನಿಂದ ಜಜ್ಜಿದ್ದ.