ನವದೆಹಲಿ: ಕಾಂಗ್ರೆಸ್ನಲ್ಲಿ ರಾಹುಲ್ ಗಾಂಧಿ (Rahul Gandhi) ಸೇರಿ ಇನ್ನಿತರ ಹಲವು ನಾಯಕರು ಕೇಂದ್ರ ಸರ್ಕಾರವನ್ನು ಟೀಕಿಸಲು ಉದ್ಯಮಿಗಳಾದ ಗೌತಮ್ ಅದಾನಿ, ಮುಕೇಶ್ ಅಂಬಾನಿಯವರ ಹೆಸರನ್ನು ಬಳಸಿಕೊಳ್ಳುವುದು ಹೊಸದಲ್ಲ. ಇಂಥ ಉದ್ಯಮಿಗಳಿಗೆ ಮಾತ್ರ ಕೇಂದ್ರ ಸರ್ಕಾರ ಸಹಾಯ ಮಾಡುತ್ತಿದೆ ಎಂಬಲ್ಲಿಂದ ಹಿಡಿದು, ಇತ್ತೀಚೆಗೆ ಅದಾನಿ ಷೇರು ಕುಸಿತವಾದರೂ ಪ್ರಧಾನಿ ಮೋದಿಯವರು ಆ ಬಗ್ಗೆ ಮಾತನಾಡುತ್ತಿಲ್ಲ ಎಂಬಲ್ಲಿವರೆಗೆ ನಿರಂತರವಾಗಿ ಆ ಪಕ್ಷ ವಾಗ್ದಾಳಿ ನಡೆಸುತ್ತಲೇ ಇದೆ.
ಹೀಗೆ ಕಾಂಗ್ರೆಸ್ಸಿಗರು ಸದಾ ಉದ್ಯಮಿಗಳ ಹೆಸರಿನ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿರುವ ಬೆನ್ನಲ್ಲೇ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಅಧ್ಯಕ್ಷ ಶರದ್ ಪವಾರ್ ಅವರು ಪ್ರತಿಕ್ರಿಯೆ ನೀಡಿ ‘ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಲು ಅಂಬಾನಿ-ಅದಾನಿ ಹೆಸರುಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ನಾವು ಅವರು ಈ ದೇಶಕ್ಕೆ ನೀಡಿರುವ ಕೊಡುಗೆಗಳನ್ನೂ ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಿರುದ್ಯೋಗ, ಬೆಲೆ ಏರಿಕೆ ಮತ್ತು ರೈತರ ಸಮಸ್ಯೆಗಳಂಥ ಮಹತ್ವದ ವಿಷಯಗಳನ್ನು ಇಟ್ಟುಕೊಂಡು ಪ್ರತಿಪಕ್ಷಗಳು ಆಡಳಿತದಲ್ಲಿರುವ ಸರ್ಕಾರವನ್ನು ಹಣಿಯಬೇಕು’ ಎಂದು ಹೇಳಿದ್ದರು.
ಶರದ್ ಪವಾರ್ ಅವರ ಈ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ನ ವಕ್ತಾರೆ ಅಲ್ಕಾ ಲಂಬಾ ಅವರು ಟ್ವೀಟ್ ಮಾಡಿದ್ದಾರೆ. ‘ಇಂದು ಭಯಭೀತರಾದ, ಆಸೆಬುರುಕ ಜನರು, ತಮ್ಮ ಹಿತಾಸಕ್ತಿಗಾಗಿ ದೇಶದ ಸರ್ವಾಧಿಕಾರಿಯನ್ನು ಹಾಡಿ ಹೊಗಳುತ್ತಿದ್ದಾರೆ. ರಾಹುಲ್ ಗಾಂಧಿಯೊಬ್ಬರೇ ಈ ದೇಶದ ಜನರಿಗಾಗಿ ದುಡಿಯುತ್ತಿದ್ದಾರೆ. ಬಂಡವಾಳಶಾಹಿ ಕಳ್ಳರು ಮತ್ತು ಅವರನ್ನು ರಕ್ಷಣೆ ಮಾಡುತ್ತಿರುವ ವಾಚ್ಮನ್ಗಳ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗೇ, ಅದಾನಿ ಮತ್ತು ಶರದ್ ಪವಾರ್ ಜತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಅಲ್ಕಾ ಲಂಬಾ ಅವರ ಟ್ವೀಟ್ಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿರುಗೇಟು ಕೊಟ್ಟಿದ್ದಾರೆ. ‘ರಾಜಕೀಯ ಇಂದಿರುತ್ತದೆ, ನಾಳೆ ಹೋಗುತ್ತದೆ. ಆದರೆ 35ವರ್ಷಗಳಿಂದಲೂ ಕಾಂಗ್ರೆಸ್ಗೆ ಬೆಂಬಲಿಸುತ್ತಿರುವ, ಭಾರತದ ಅತ್ಯಂತ ಹಿರಿಯ ರಾಜಕೀಯ ನಾಯಕರಲ್ಲಿ ಒಬ್ಬರಾಗಿರುವ, ಮಹಾರಾಷ್ಟ್ರದಲ್ಲಿ 4 ಬಾರಿ ಮುಖ್ಯಮಂತ್ರಿಯಾಗಿದ್ದ ಶರದ್ಪವಾರ್ ಬಗ್ಗೆ ಕಾಂಗ್ರೆಸ್ನವರು ಇಂಥ ಟ್ವೀಟ್ ಮಾಡಿದ್ದು ನಿಜಕ್ಕೂ ಆಘಾತಕಾರಿಯಾಗಿದೆ. ರಾಹುಲ್ ಗಾಂಧಿಯವರು ಭಾರತದ ರಾಜಕಾರಣದ ಸಂಸ್ಕೃತಿಯನ್ನು ವಿಕೃತಿಗೊಳಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.