‘ಇನ್ನು 15 ದಿನಗಳಲ್ಲಿ ಎರಡು ಪ್ರದೇಶಗಳಲ್ಲಿ ರಾಜಕೀಯ ಭೂಕಂಪವಾಗುತ್ತದೆ. ಒಂದು ದೆಹಲಿಯಲ್ಲಿ..ಮತ್ತೊಂದು ಮಹಾರಾಷ್ಟ್ರದಲ್ಲಿ..’-ಎನ್ಸಿಪಿ ನಾಯಕ ಶರದ್ ಪವಾರ್ (Sharad Pawar) ಪುತ್ರಿ ಸುಪ್ರಿಯಾ ಸುಳೆ ಅವರು ಏಪ್ರಿಲ್ 19ರಂದು ಈ ಮಾತು ಹೇಳಿದ್ದರು. ಸುಪ್ರಿಯಾ ಈ ಹೇಳಿಕೆ ನೀಡಿ ಸರಿಯಾಗಿ 13 ದಿನಕ್ಕೆ ಅಂದರೆ ಇಂದು (ಮೇ 2) ಮಹಾರಾಷ್ಟ್ರದಲ್ಲಿ ಒಂದು ಅಚ್ಚರಿಯ ಬೆಳವಣಿಗೆಯಾಯಿತು. ಶರದ್ ಪವಾರ್ ಅವರು ಎನ್ಸಿಪಿ ಪಕ್ಷದ ಅಧ್ಯಕ್ಷನ (NCP President) ಸ್ಥಾನಕ್ಕೆ ತಾವು ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು (Sharad Pawar Resigns). ಇನ್ನೊಂದು ದೆಹಲಿಯಲ್ಲಿ ಎಂದು ಸುಪ್ರಿಯಾ ಸುಳೆ ಹೇಳಿದ್ದಾರೆ. ನೋಡೋಣ ದೆಹಲಿಯಲ್ಲಿ ಏನಾಗುತ್ತದೆ ಎಂದು.! ಅವರು ಹೇಳಿದ 15ದಿನವಾಗಲು ಇನ್ನೆರಡು ದಿನ ಬಾಕಿ ಇದೆ.
ಶರದ್ ಪವಾರ್ ಅವರು ಇಂದು ಮುಂಬಯಿಯಲ್ಲಿ ಎನ್ಸಿಪಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ‘ನಾನು ನನ್ನ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನಷ್ಟೇ ಕಳಚಿಡುತ್ತಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಮುಂದುವರಿಯುತ್ತೇನೆ. ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತಿಲ್ಲ’ ಎಂದು ಹೇಳಿದ್ದಾರೆ. 1999ರಲ್ಲಿ ಎನ್ಸಿಪಿ ಪಕ್ಷ ಸ್ಥಾಪನೆಯಾದಾಗಿನಿಂದ ಶರದ್ ಪವಾರ್ ಅವರು ಅಧ್ಯಕ್ಷರಾಗಿದ್ದರು. ಎರಡು ದಶಕಗಳ ಮುಖ್ಯಸ್ಥನ ಸ್ಥಾನವನ್ನು ತಾನ್ಯಾಕೆ ಬಿಡುತ್ತಿದ್ದೇನೆ ಎಂಬುದಕ್ಕೆ ಅವರೇನೂ ನಿಖರವಾದ ಕಾರಣ ಕೊಟ್ಟಿಲ್ಲ.
ಎನ್ಸಿಪಿಯ ಮುಂದಿನ ಮುಖ್ಯಸ್ಥರು ಯಾರಾಗಲಿದ್ದಾರೆ ಎಂಬುದನ್ನೂ ಶರದ್ ಪವಾರ್ ಹೇಳಲಿಲ್ಲ. ಬದಲಿಗೆ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡಲು ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುತ್ತದೆ ಎಂದು ಹೇಳಿದ್ದಾರೆ. ಆ ಸಮಿತಿಯಲ್ಲಿ ಎನ್ಸಿಪಿ ನಾಯಕರಾದ ಪ್ರಫುಲ್ ಪಟೇಲ್, ಸುನಿಲ್ ಟಾಟ್ಕರೆ, ಪಿ.ಸಿ.ಚಾಕೋ, ನರಹರಿ ಝಿರ್ವಾಲ್, ಅಜಿತ್ ಪವಾರ್, ಸುಪ್ರಿಯಾ ಸುಳೆ, ಜಯಂತ್ ಪಾಟಿಲ್, ಛಗನ್ ಭುಜಬಲ್, ದಿಲೀಪ್ ವಾಲ್ಸೆ-ಪಾಟೀಲ್, ಅನಿಲ್ ದೇಶಮುಖ್, ರಾಜೇಶ್ ಟೋಪೆ, ಜಿತೇಂದ್ರ ಅವದ್, ಹಸನ್ ಮುಶ್ರೀಫ್, ಧನಂಜಯ್ ಮುಂಡೆ, ಜಯದೇವ್ ಗಾಯಕ್‌ವಾಡ್ ಮತ್ತು ಪಕ್ಷದ ಮುಂಚೂಣಿ ಘಟಕಗಳ ಮುಖ್ಯಸ್ಥರೆಲ್ಲ ಇದ್ದಾರೆ ಎಂದು ಅಜಿತ್ ಪವಾರ್ ತಿಳಿಸಿದ್ದಾರೆ.
ಇದನ್ನೂ ಓದಿ: Sharad Pawar: ಎನ್ಸಿಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಶರದ್ ಪವಾರ್ ನಿರ್ಧಾರ
ಭಾವುಕರಾದ ಪಕ್ಷದ ಕಾರ್ಯಕರ್ತರು
ಇಂದು ಶರದ್ ಪವಾರ್ ಎನ್ಸಿಪಿ ಮುಖ್ಯಸ್ಥನ ಸ್ಥಾನ ಬಿಡುವುದಾಗಿ ಘೋಷಣೆ ಮಾಡುತ್ತಿದ್ದಂತೆ ಪಕ್ಷದ ಹಲವು ಕಾರ್ಯಕರ್ತರು ಕಣ್ಣೀರು ಹಾಕಿದ್ದಾರೆ. ದಯವಿಟ್ಟು ನೀವು ರಾಜೀನಾಮೆ ಕೊಡಬೇಡಿ ಎಂದು ಅವರ ಎದುರು ಬೇಡಿಕೊಂಡಿದ್ದಾರೆ. ಇನ್ನೂ ಕೆಲವರು ಪ್ರತಿಭಟನೆಯನ್ನೂ ನಡೆಸಿ, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದಾರೆ.
ಅಜಿತ್ ಪವಾರ್ ಕಾರಣವಾ?
ಇತ್ತೀಚೆಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ಅಜಿತ್ ಪವಾರ್ ಸ್ವಲ್ಪ ರೆಬಲ್ ಆದಂತೆ ಗೋಚರಿಸುತ್ತಿದೆ. ಶರದ್ ಪವಾರ್ ಅವರ ಸೋದರಳಿಯನಾಗಿರುವ ಅಜಿತ್ ಪವಾರ್ ಮತ್ತೆ ಬಿಜೆಪಿಯೊಟ್ಟಿಗೆ ಕೈಜೋಡಿಸುತ್ತಾರೆ ಎಂಬ ಸುದ್ದಿಯೊಂದು ಬಲವಾಗಿ ಹರಡುತ್ತಿದೆ. ಈ ಹಿಂದೆ 2019ರಲ್ಲಿ ಅಜಿತ್ ಪವಾರ್ ರಾತ್ರೋರಾತ್ರಿ ಬಿಜೆಪಿಗೆ ಏಕಾಂಗಿಯಾಗಿ ಬೆಂಬಲ ಸೂಚಿಸಿದ್ದಲ್ಲದೆ, ಮುಂಜಾನೆಯಷ್ಟರಲ್ಲಿ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ, ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಆದರೆ ಬಳಿಕ ವಾಪಸ್ ಎನ್ಸಿಪಿಗೆ ಆಗಮಿಸಿ, ಶರದ್ ಪವಾರ್ರನ್ನು ಬಿಟ್ಟು ಇನ್ನೆಲ್ಲಿಗೂ ಹೋಗೋದಿಲ್ಲ ಎಂದಿದ್ದರು.
ಆದರೆ ಈಗ ಅವರು ಎನ್ಸಿಪಿಯ ಒಟ್ಟು 53 ಶಾಸಕರಲ್ಲಿ, 34 ಜನರೊಂದಿಗೆ ಹೋಗಿ ಬಿಜೆಪಿಯೊಂದಿಗೆ ಕೈಜೋಡಿಸಲು ಮುಂದಾಗಿದ್ದಾರೆ ಎಂಬ ಗುಮಾನಿ ಎದ್ದಿದೆ. ಇದೇ ಕಾರಣಕ್ಕೆ ಅಜಿತ್ ಪವಾರ್ನನ್ನು ಸಮಾಧಾನ ಪಡಿಸಲು, ಅವರಿಗೆ ಎನ್ಸಿಪಿ ಮುಖ್ಯಸ್ಥನ ಸ್ಥಾನ ವಹಿಸಿಕೊಡಲು ಶರದ್ ಪವಾರ್ ಹಿಂದೆ ಸರಿದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.