ನವ ದೆಹಲಿ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (NCP)ದ ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ (Sharad Pawar)ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದಾರೆ. ಇದನ್ನು ಶರದ್ ಪವಾರ್ ಅವರೇ ಸ್ವತಃ ಸ್ಪಷ್ಟಪಡಿಸಿದ್ದಾರೆ. ‘ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ’ ಎಂದು ಹೇಳಿದ್ದಾರೆ. ಎನ್ಸಿಪಿಯ ಮುಂದಿನ ಅಧ್ಯಕ್ಷರಾಗಿ ಅವರ ಸಂಬಂಧಿ ಅಜಿತ್ ಪವಾರ್ ನೇಮಕಗೊಳ್ಳುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.
ಅಂದಹಾಗೇ, ಶರದ್ ಪವಾರ್ ಅವರು ಎನ್ಸಿಪಿಯ ಸಹಸಂಸ್ಥಾಪಕರಲ್ಲಿ ಒಬ್ಬರು. 1999ರಲ್ಲಿ ಶರದ್ ಪವಾರ್, ತಾರಿಕ್ ಅನ್ವರ್ ಮತ್ತು ಪಿ.ಎ.ಸಂಗ್ಮಾ ಸೇರಿ ಈ ಪಕ್ಷವನ್ನು ಸ್ಥಾಪಿಸಿದ್ದಾರೆ. ಆಗಿನಿಂದಲೂ ಶರದ್ ಪವಾರ್ ಅವರೇ ಎನ್ಸಿಪಿ ಮುಖ್ಯಸ್ಥರಾಗಿದ್ದಾರೆ. ಈ ಮೂವರೂ ಕಾಂಗ್ರೆಸ್ನಲ್ಲಿ ಇದ್ದರು. ಬಳಿಕ ಭಾರತೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಜತೆ ಭಿನ್ನಾಭಿಪ್ರಾಯ ಉಂಟಾಗಿ, ಈ ಮೂವರನ್ನೂ ಪಕ್ಷ ಉಚ್ಚಾಟನೆ ಮಾಡಿತ್ತು. ನಂತರ ಎನ್ಸಿಪಿ ಸ್ಥಾಪಿಸಿದ್ದರು.
ಇಂದು ಮುಂಬಯಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶರದ್ ಪವಾರ್, ‘ನಾನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯಲು ನಿರ್ಧಾರ ಮಾಡಿದ್ದೇನೆ. ಅದರರ್ಥ ನಾನು ಸಕ್ರಿಯ ರಾಜಕಾರಣದಿಂದ ನಿವೃತ್ತನಾಗುತ್ತಿದ್ದೇನೆ ಎಂದಲ್ಲ. ಸಾರ್ವಜನಿಕ ಜೀವನದಿಂದ ದೂರ ಸರಿಯುವುದಿಲ್ಲ. ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಭಾಗವಹಿಸುತ್ತಿರುತ್ತೇನೆ. ನಾನು ಪುಣೆ, ಮುಂಬಯಿ, ಬಾರಾಮತಿ, ದೆಹಲಿ ಅಥವಾ ದೇಶದ ಯಾವುದೇ ಭಾಗದಲ್ಲಿ ಇರಲಿ, ಈಗ ನಿಮಗೆಲ್ಲ ಹೇಗೆ ಸಿಗುತ್ತಿದ್ದೇನೋ, ಮುಂದೆಯೂ ಅದೇ ರೀತಿ ಸಿಗುತ್ತೇನೆ. ನಿಮ್ಮೊಂದಿಗೆ ಮಾತುಕತೆ ನಡೆಸುತ್ತೇನೆ’ ಎಂದು ಹೇಳಿದ್ದಾರೆ.
‘ನನ್ನ ರಾಜ್ಯ ಸಭೆ ಸದಸ್ಯನ ಸ್ಥಾನದ ಅವಧಿ ಇನ್ನು ಮೂರು ವರ್ಷ ಇದೆ. ಮಹಾರಾಷ್ಟ್ರ ಮತ್ತು ಇಡೀ ದೇಶದ ಸಮಸ್ಯೆಗಳ ಬಗ್ಗೆ ನಾನು ಈ ಅವಧಿಯಲ್ಲಿ ಧ್ವನಿ ಎತ್ತುತ್ತೇನೆ. 1960ರ ಮೇ 1ರಿಂದ 2023ರ ಮೇ 1ರವರೆಗೆ ಸುದೀರ್ಘ ಅವಧಿಯಲ್ಲಿ ಸಾರ್ವಜನಿಕ ಜೀವನದಲ್ಲಿ ಇದ್ದೇನೆ. ಈಗ ಒಂದು ಹೆಜ್ಜೆಯನ್ನು ಮಾತ್ರ ಹಿಂದಡಿ ಇಡುತ್ತಿದ್ದೇನೆ’ ಎಂದು ಹೇಳಿರುವ ಶರದ್ ಪವಾರ್, ‘ಮುಂದಿನ ಅಧ್ಯಕ್ಷನನ್ನು ಆಯ್ಕೆ ಮಾಡಲು ಒಂದು ಸಮಿತಿಯನ್ನು ರಚಿಸಲಾಗುತ್ತದೆ’ ಎಂದು ಹೇಳಿದ್ದಾರೆ.
1999ಕ್ಕೂ ಮೊದಲು ಕಾಂಗ್ರೆಸ್ನಲ್ಲಿ ಇದ್ದ ಶರದ್ ಪವಾರ್ ಅವರು ಮಹಾರಾಷ್ಟ್ರದ ಪ್ರಬಲ, ಮುತ್ಸದ್ದಿ ರಾಜಕಾರಣಿ. ಒಟ್ಟು ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಮಾಜಿ ಪ್ರಧಾನಿ ಪಿ.ವಿ.ನರಸಿಂಹ್ ರಾವ್ ಕ್ಯಾಬಿನೆಟ್ನಲ್ಲಿ ರಕ್ಷಣಾ ಸಚಿವರಾಗಿದ್ದರು. ಮನ್ಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕೇಂದ್ರ ಕೃಷಿ ಸಚಿವರೂ ಆಗಿ ಕಾರ್ಯನಿರ್ವಹಿಸಿದ್ದಾರೆ. 2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಳಿಕ ಶಿವಸೇನೆ ಮತ್ತು ಕಾಂಗ್ರೆಸ್ನೊಟ್ಟಿಗೆ ಮೈತ್ರಿ ಮಾಡಿಕೊಂಡು, ಮಹಾ ವಿಕಾಸ್ ಅಘಾಡಿ ಸರ್ಕಾರದ ಒಂದು ಭಾಗವಾಗಿದ್ದರು.