Site icon Vistara News

ಆ ಮಹಿಳೆ ನನ್ನ ಸೋದರಿಯಂತೆ; ಹಲ್ಲೆ ಮಾಡಿದ ಬಳಿಕ ಬಿಜೆಪಿ ನಾಯಕ ಶ್ರೀಕಾಂತ್​ ತ್ಯಾಗಿ ಹೇಳಿಕೆ

She is like my sister Says Shrikant Tyagi

ನೊಯ್ಡಾ: ಗ್ರ್ಯಾಂಡ್​ ಒಮ್ಯಾಕ್ಸ್​ ಹೌಸಿಂಗ್​ ಸೊಸೈಟಿ ಬಳಿಕ ಮಹಿಳೆಯೊಬ್ಬರನ್ನು ನಿಂದಿಸಿ, ಹಲ್ಲೆ ನಡೆಸಿದ ಆರೋಪದಡಿ ಬಂಧಿತರಾಗಿರುವ ಬಿಜೆಪಿ ಮುಖಂಡ ಶ್ರೀಕಾಂತ್​ ತ್ಯಾಗಿ ಇದೀಗ ಪೊಲೀಸರ ಎದುರು ‘ಆಕೆ ನನ್ನ ಸಹೋದರಿಯಿದ್ದಂತೆ. ಯಾರೋ ರಾಜಕೀಯವಾಗಿ ನನ್ನನ್ನು ಮುಗಿಸಬೇಕು ಎಂದು ಪ್ಲ್ಯಾನ್​ ಮಾಡಿ, ಆ ಮಹಿಳೆಯನ್ನು ನನ್ನ ವಿರುದ್ಧ ಎತ್ತಿಕಟ್ಟಿದ್ದಾರೆ. ಘಟನೆ ಬಗ್ಗೆ ನನಗೂ ವಿಷಾದವಿದೆ’ ಎಂದು ಹೇಳಿಕೊಂಡಿದ್ದಾರೆ. ತ್ಯಾಗಿಯನ್ನು ಕೋರ್ಟ್​​ನಿಂದ ವಾಪಸ್​ ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ‘ಇದೆಲ್ಲ ಪೂರ್ತಿಯಾಗಿ ರಾಜಕೀಯ ವಿಚಾರವಾಗಿ ಪರಿವರ್ತನೆಗೊಂಡಿದೆ’ ಎಂದು ತಿಳಿಸಿದ್ದಾರೆ.

ಶ್ರೀಕಾಂತ್​ ತ್ಯಾಗಿ ತಮ್ಮನ್ನು ತಾವು ಬಿಜೆಪಿಯ ಕಿಸಾನ್​ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪರಿಚಯ ಮಾಡಿಕೊಂಡಿದ್ದಾರೆ. ಇವರು ಗ್ರ್ಯಾಂಡ್​ ಒಮ್ಯಾಕ್ಸ್​ ಹೌಸಿಂಗ್ ಪಾರ್ಕ್​​ನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರು ಎಂಬ ಆರೋಪ ಈ ಹಿಂದೆಯೇ ಕೇಳಿಬಂದಿತ್ತು. ಅದರಂತೆ ತ್ಯಾಗಿ ಪಾರ್ಕ್​​ನಲ್ಲಿ ಸಸಿಗಳನ್ನು ನೆಡುವ ಕಾರ್ಯ ನಡೆಸುತ್ತಿದ್ದರು. ಆದರೆ ಹೀಗೆ ಮಾಡಿದರೆ ಇಲ್ಲಿರುವ ಜನರಿಗೆ ತೊಂದರೆಯಾಗುತ್ತದೆ ಎಂದು ಈ ಮಹಿಳೆ ಮುಂದಾಗಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಶ್ರೀಕಾಂತ್​ ತ್ಯಾಗಿ ಆಕೆಗೆ ನಿಂದಿಸಿ, ತಳ್ಳಿದ್ದರು. ಆ ವಿಡಿಯೋ ಕೂಡ ಸಿಕ್ಕಾಪಟೆ ವೈರಲ್ ಆಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳು ಜತೆ, ಯೋಗಿ ಆದಿತ್ಯನಾಥ್​ ಸರ್ಕಾರ ಕೂಡ ತ್ಯಾಗಿ ವಿರುದ್ಧ ಕ್ರಮ ಕೈಗೊಂಡಿತ್ತು. ತ್ಯಾಗಿ ಅಕ್ರಮವಾಗಿ ಕಟ್ಟಿದ್ದ ಮನೆಯನ್ನು ಬುಲ್ಡೋಜರ್​ ಮೂಲಕ ಕೆಡವಲಾಗಿತ್ತು.

ಇಷ್ಟೆಲ್ಲ ಆಗುತ್ತಿದ್ದರೂ ಶ್ರೀಕಾಂತ್​ ತ್ಯಾಗಿ ನಾಪತ್ತೆಯಾಗಿದ್ದರು. ಹೀಗಾಗಿ ಪೊಲೀಸರು ತ್ಯಾಗಿ ಪತ್ನಿಯನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದರು. ಮೂರು ದಿನಗಳ ಕಾಲ ಕಾಣೆಯಾಗಿದ್ದ ಶ್ರೀಕಾಂತ್​ ತ್ಯಾಗಿ ಆಗಸ್ಟ್​ 9ರಂದು ಮೀರತ್​​ನಲ್ಲಿ ಅರೆಸ್ಟ್​ ಆಗಿದ್ದರು. ಅವರನ್ನು ಕೋರ್ಟ್​​ಗೆ ಹಾಜರುಪಡಿಸಲಾಗಿತ್ತು. ಅವರನ್ನೀಗ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳಿಸಿದೆ. ಶ್ರೀಕಾಂತ್​ ತ್ಯಾಗಿ ಕಾರಿನ ಮೇಲೆ ವಿವಿಐಪಿ ಸ್ಟಿಕ್ಕರ್​ ಇದ್ದು, ಅದನ್ನು ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್​ ಮೌರ್ಯ ತ್ಯಾಗಿಗೆ ಕೊಟ್ಟಿದ್ದರು ಎಂಬುದು ಗೊತ್ತಾಗಿದೆ ಎಂದು ನೊಯ್ಡಾ ಪೊಲೀಸ್ ಆಯುಕ್ತ ಅಲೋಕ್​ ಕುಮಾರ್​ ತಿಳಿಸಿದ್ದಾರೆ. ಹಾಗೇ, ಕಾರಿನ ಮೇಲೆ ಇರುವ ರಾಜ್ಯ ಲಾಂಛನವನ್ನು ಸ್ವತಃ ಶ್ರೀಕಾಂತ್​ ತ್ಯಾಗಿಯೇ ತಯಾರಿಸಿಕೊಂಡಿದ್ದರು ಎಂಬುದೂ ಗೊತ್ತಾಗಿದೆ. ಸ್ವಾಮಿ ಪ್ರಸಾದ್​ ಮೌರ್ಯ ಮೊದಲು ಬಿಜೆಪಿಯಲ್ಲಿ ಇದ್ದವರು. ಈ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಬಿಜೆಪಿಯಿಂದ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಇದನ್ನೂ ಓದಿ: Noida Politician Case | ಮಹಿಳೆಯನ್ನು ನಿಂದಿಸಿ ಪರಾರಿಯಾಗಿದ್ದ ಬಿಜೆಪಿ ಮುಖಂಡ ​ತ್ಯಾಗಿ ಅರೆಸ್ಟ್​

Exit mobile version