Site icon Vistara News

Tunisha Sharma | ಅಮ್ಮ-ಚಿಕ್ಕಪ್ಪನ ಕಾರಣಕ್ಕೆ ಮನ ನೊಂದಿದ್ದಳು ತುನಿಶಾ; ಶಿಜಾನ್ ಖಾನ್​​ ಸೋದರಿಯರು ಹೇಳಿದ ವಿಚಾರಗಳಿವು

Tunisha Sharma Death Case 1

ಮುಂಬಯಿ: ಬಾಲಿವುಡ್​ ಕಿರುತೆರೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಕೇಸ್​​ನಲ್ಲಿ ಬಂಧಿತನಾಗಿರುವ ಆಕೆಯ ಬಾಯ್​ಫ್ರೆಂಡ್​, ಸಹನಟ ಶಿಜಾನ್​ ಖಾನ್​ ಕುಟುಂಬದವರು ಇಂದು ಸುದ್ದಿಗೋಷ್ಠಿ ನಡೆಸಿ, ಹಲವು ವಿಷಯಗಳನ್ನು ಮಾಧ್ಯಮಗಳ ಎದುರು ಬಿಚ್ಚಿಟ್ಟಿದ್ದಾರೆ.

ತುನಿಶಾ ಶರ್ಮಾ ಅವರು ಡಿಸೆಂಬರ್​ 24ರಂದು ‘ಅಲಿಬಾಬಾ ದಾಸ್ತಾನ್​ ಇ ಕಾಬೂಲ್​’ ಶೂಟಿಂಗ್​ ಸೆಟ್​​ನಲ್ಲಿ, ಶಿಜಾನ್ ಖಾನ್​ ಮೇಕಪ್​ ರೂಮಿನ ಶೌಚಗೃಹದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಆಕೆಯ ತಾಯಿ ಶಿಜಾನ್​ ವಿರುದ್ಧ ದೂರು ನೀಡಿದ್ದರು. ಶಿಜಾನ್ ಖಾನ್​ ನನ್ನ ಮಗಳೊಂದಿಗೆ ಪ್ರೀತಿ ನಾಟಕವಾಡಿ, ಬಳಿಕ ಬ್ರೇಕಪ್​ ಮಾಡಿಕೊಂಡು ವಂಚನೆ ಮಾಡಿದ. ಇದೇ ಕಾರಣಕ್ಕೆ ಆಕೆ ನೊಂದು ಖಿನ್ನತೆಗೆ ಜಾರಿದ್ದಳು. ಇಸ್ಲಾಂಗೆ ಮತಾಂತರವಾಗು ಎಂದು ಪೀಡಿಸುತ್ತಿದ್ದ. ಅವನ ಹಿಜಾಬ್​ ಧರಿಸು, ಉರ್ದು ಕಲಿ ಎಂದು ಬಲವಂತ ಮಾಡುತ್ತಿದ್ದ. ಇಷ್ಟೆಲ್ಲ ಆದ ಮೇಲೆ ಕೊನೆಯಲ್ಲಿ ಆಕೆಗೆ ಮೋಸ ಮಾಡಿದ ಎಂದು ತುನಿಶಾ ಶರ್ಮಾರ ತಾಯಿ ವನಿತಾ ಶರ್ಮಾ ಹೇಳಿದ್ದರು. ಪೊಲೀಸರು ಶಿಜಾನ್​ ಖಾನ್​ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ತುನಿಶಾ ಶರ್ಮಾರ ಸಾವಿನ ಬಗ್ಗೆ ಹೀಗೆ ಇಡೀ ದೇಶಾದ್ಯಂತ ಒಂದೊಂದು ಆಯಾಮದಲ್ಲಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ, ಇದೇ ಮೊದಲ ಬಾರಿಗೆ ಆತನ ಕುಟುಂಬದವರು ಸಾರ್ವಜನಿಕವಾಗಿ ಬಂದು ಸುದ್ದಿಗೋಷ್ಠಿ ನಡೆಸಿದ್ದಾರೆ. ತಾಯಿ ಕೆಹೆಕ್ಷನ್ ಫೈಸಿ, ಸಹೋದರಿಯರಾದ ಶಫಕ್ ನಾಜ್ ಮತ್ತು ಫಾಲಕ್ ನಾಜ್ (ಇವರಿಬ್ಬರೂ ನಟಿಯರು) ಮಾಧ್ಯಮಗಳ ಜತೆ ಮಾತನಾಡಿ ‘ತುನಿಶಾ ಶರ್ಮಾ ತಾಯಿ ಮಾಡುತ್ತಿರುವ ಆರೋಪಗಳೆಲ್ಲ ಸುಳ್ಳು’ ಎಂದು ಹೇಳಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಶಿಜಾನ್​ ಪರ ವಕೀಲರು ಮಾತನಾಡಿ, ‘ಶಿಜಾನ್​ನೊಂದಿಗೆ ಬ್ರೇಕಪ್​ ಆಯಿತು ಎಂಬ ಕಾರಣಕ್ಕೆ ತುನಿಶಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕಾರಣವೇನೋ ಬೇರೆಯದ್ದೇ ಇದೆ. ಆದರೆ ಈ ಕೇಸ್​​ನಲ್ಲಿ ಶಿಜಾನ್​​ನ್ನು ಸುಮ್ಮನೆ ಸಿಲುಕಿಸಲಾಗಿದೆ’ ಎಂದು ಹೇಳಿದ್ದಾರೆ.

ಒಪ್ಪಿತ ಬ್ರೇಕಪ್​
‘ಶಿಜಾನ್ ಖಾನ್​ ಮತ್ತು ತುನಿಶಾ ಶರ್ಮಾ ಪರಸ್ಪರ ಒಪ್ಪಿಕೊಂಡೇ ತಮ್ಮ ಸಂಬಂಧ ಮುರಿದುಕೊಂಡಿದ್ದಾರೆ. ನಾವಿಬ್ಬರೂ ಇನ್ನೂ ಪ್ರಬುದ್ಧರಾಗಿಲ್ಲ. ಈಗಲೇ ಮದುವೆ-ಪ್ರೀತಿಯ ಕಡೆ ಗಮನ ಹರಿಸುವುದು ಬೇಡ. ಮೊದಲು ವೃತ್ತಿ ಜೀವನದಲ್ಲಿ ಗಟ್ಟಿಯಾಗಿ ನೆಲೆಯೂರೋಣ. ಸದ್ಯ ಪ್ರೀತಿ-ಸಂಬಂಧ ಬೇಡ ಎಂದು ಇಬ್ಬರೂ ಮಾತನಾಡಿಕೊಂಡೇ ಬ್ರೇಕಪ್​ ಮಾಡಿಕೊಂಡಿದ್ದರು’ ಎಂದು ವಕೀಲರು ಪ್ರತಿಪಾದಿಸಿದ್ದಾರೆ.

ಹಾಗೇ, ಶಿಜಾನ್​ ಅಮ್ಮ-ಸೋದರಿಯರು ಮಾತನಾಡಿ ‘ನಾವಾಗಲೀ, ನಮ್ಮ ಸೋದರನಾಗಲೀ ಎಂದಿಗೂ ತುನಿಶಾಗೆ ಹಿಜಾಬ್​ ಧರಿಸು, ಇಸ್ಲಾಂಗೆ ಮತಾಂತರವಾಗು ಎಂದು ಒತ್ತಾಯ ಮಾಡಿಲ್ಲ. ಆಕೆ ಹಿಜಾಬ್​ ಧರಿಸಿರುವ ಫೋಟೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವುದನ್ನು ನೋಡಿದ ಜನರು, ತುನಿಶಾ ದರ್ಗಾಕ್ಕೆ ಭೇಟಿಕೊಟ್ಟಾಗ ಹಿಜಾಬ್​ ಧರಿಸಿದ್ದಳು ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವ ಅದಲ್ಲ. ಯಾವುದೋ ಒಂದು ಟಿವಿ ಸೀರಿಸ್​​ನಲ್ಲಿ ಚಿತ್ರೀಕರಣಕ್ಕಾಗಿ ಆಕೆ ಹಿಜಾಬ್​ ಧರಿಸಿದ್ದಳು. ಈಗ ವೈರಲ್ ಆಗುತ್ತಿರುವುದು ಅದೇ ಫೋಟೋ ಎಂದು ಹೇಳಿದ್ದಾರೆ.

ತುನಿಶಾ ಅಮ್ಮನ ಮೇಲೆ ಆರೋಪ
ತುನಿಶಾ ಶರ್ಮಾ ನಮ್ಮ ಕುಟುಂಬಕ್ಕೆ ತುಂಬ ಹತ್ತಿರದವಳು. ಆಕೆಯನ್ನು ಕಳೆದುಕೊಂಡು ನಾವೆಷ್ಟು ನೋವಲ್ಲಿ ಇದ್ದೇವೆ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ ಎಂದು ಹೇಳಿದ ಶಿಜಾನ್​ ಕುಟುಂಬಸ್ಥರು, ತುನಿಶಾ ಅಮ್ಮ ವನಿತಾ ಮೇಲೆಯೂ ಕೆಲವು ಆರೋಪಗಳನ್ನು ಮಾಡಿದ್ದಾರೆ. ವನಿತಾ ಶರ್ಮಾ ಅವರು ತುನಿಶಾ ಮೇಲೆ ಪ್ರಭುತ್ವ ಸಾಧಿಸುತ್ತಿದ್ದರು. ತಾನು ಹೇಳಿದಂತೇ ಕೇಳಬೇಕು ಎಂದು ಹೇಳುತ್ತಿದ್ದರು. ತುನಿಶಾ ಚಿಕ್ಕಪ್ಪ ಸಂಜೀವ್​ ಕುಶಾಲ್​ ಅವರಿಗೆ ಆಕೆಯ ತಾಯಿ ವನಿತಾ ಶರ್ಮಾರೊಂದಿಗೆ ಸಂಬಂಧವಿದೆ. ಇವರಿಬ್ಬರೂ ಸೇರಿ ತುನಿಶಾರನ್ನು ನಿಯಂತ್ರಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ಶಿಜಾನ್​ ಸಹೋದರಿ ಫಲಕ್ ನಾಜ್ ಮಾತನಾಡಿ ‘ತುನಿಶಾಗೆ ಆಕೆಯ ಅಂಕಲ್​ ಸಂಜೀವ್ ಕುಶಾಲ್​​ರನ್ನು ನೋಡಿದರೇ ಆಗುತ್ತಿರಲಿಲ್ಲ. ಅವನ ಹೆಸರು ಕೇಳಿದರೂ ಅಸಹ್ಯಪಟ್ಟುಕೊಳ್ಳುತ್ತಿದ್ದಳು. ಇನ್ನು ತಾಯಿಯೊಂದಿಗೂ ಆಕೆಯ ಸಂಬಂಧ ಚೆನ್ನಾಗಿರಲಿಲ್ಲ. ‘ಅಮ್ಮ ನನ್ನ ಮೊಬೈಲ್​ ಒಡೆದು ಹಾಕಿದ್ದರು, ಒಂದು ಸಲ ನನ್ನ ಕತ್ತು ಹಿಸುಕಲೂ ಪ್ರಯತ್ನಿಸಿದ್ದರು’ ಎಂದು ತುನಿಶಾ ನಮ್ಮ ಬಳಿಯೇ ಹೇಳಿಕೊಂಡಿದ್ದಳು’ ಎಂಬ ಮಾಹಿತಿಯನ್ನೂ ತಿಳಿಸಿದ್ದಾರೆ.

ನೇಣಿನ ಕುಣಿಕೆ ಫೋಟೋ ತೋರಿಸಿದ್ದಳು!
ಹಾಗೇ, ತುನಿಶಾ ಸಾಯುವುದಕ್ಕೂ ಮುಂಚಿನ ದಿನ ತನ್ನ ಸಹನಟ ಪಾರ್ಥ ಜುಟ್ಸಿಗೆ ಒಂದು ನೇಣಿನ ಕುಣಿಕೆಯ ಫೋಟೋವನ್ನು ತೋರಿಸಿದ್ದಳು. ಆಗ ಪಾರ್ಥ, ‘ಈ ಫೋಟೋ ಯಾಕೆ ನೋಡ್ತಿದ್ದೀಯಾ’ ಎಂದು ಕೇಳಿದ್ದಕ್ಕೆ, ‘ಇಲ್ಲ ಇಲ್ಲ, ಫೋಟೋ ಕಾಣಿಸಿತು. ಹೀಗೆ ತೋರಿಸಿದ್ದಷ್ಟೇ. ಬೇರೇನೂ ಇಲ್ಲ’ ಎಂದು ಹೇಳಿದ್ದಳು. ಮರುದಿನ ನೇಣು ಹಾಕಿಕೊಂಡಿದ್ದಾಳೆ. ಡಿ.24ರಂದು ತುನಿಶಾ ಮತ್ತು ಶಿಜಾನ್ ಮಧ್ಯೆ ಜಗಳವಾಯಿತು. ಅದಾದ ಮೇಲೆ ಆಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುದು ಸುಳ್ಳು’ ಎಂದೂ ಶಿಜಾನ್ ಕುಟುಂಬದವರು ತಿಳಿಸಿದ್ದಾರೆ.

ಇದನ್ನೂ ಓದಿ: Tunisha Sharma Death | ತುನಿಶಾ ಶರ್ಮಾಳನ್ನು ಇಸ್ಲಾಂಗೆ ಮತಾಂತರಗೊಳಿಸಲು ಶಿಜಾನ್‌ ಒತ್ತಾಯ, ಸಂಚಲನ ಸೃಷ್ಟಿಸಿದ ನಟಿಯ ತಾಯಿ ಹೇಳಿಕೆ

Exit mobile version