ದೆಹಲಿ ಮಹಾನಗರ ಪಾಲಿಕೆ ಮೇಯರ್ (Delhi Mayor) ಆಗಿ ಶೆಲ್ಲಿ ಒಬೆರಾಯ್ (Shelly Oberoi) ಅವರು ಎರಡನೇ ಅವಧಿಗೂ ಆಯ್ಕೆಯಾಗಿದ್ದಾರೆ. ಮೇಯರ್ ಸ್ಥಾನಕ್ಕಾಗಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದ ಶಿಖಾ ರೈ ಅವರು ಕೊನೇ ಕ್ಷಣದಲ್ಲಿ ತಮ್ಮ ನಾಮಪತ್ರ ವಾಪಸ್ ಪಡೆದ ಕಾರಣ ಶೆಲ್ಲಿ ಒಬೆರಾಯ್ ಅವಿರೋಧ ಆಯ್ಕೆಯಾದರು. ಇನ್ನೊಂದೆಡೆ ಡೆಪ್ಯೂಟಿ ಮೇಯರ್ ಸ್ಥಾನಕ್ಕೆ ಆಲೆ ಮೊಹಮ್ಮದ್ ಇಕ್ಬಾಲ್ ಅವರೂ ಕೂಡ ಮರು ಚುನಾಯಿತರಾದರು. ಡೆಪ್ಯೂಟಿ ಮೇಯರ್ ಹುದ್ದೆಗಾಗಿ ಬಿಜೆಪಿಯಿಂದ ಸೋನಿ ಪಾಲ್ ಅವರು ಕಣಕ್ಕೆ ಇಳಿದಿದ್ದರು. ಆದರೆ ಕೊನೇ ಕ್ಷಣದಲ್ಲಿ ಅವರೂ ಕೂಡ ರೇಸ್ನಿಂದ ಹಿಂದೆ ಸರಿದ ಪರಿಣಾಮ ಇಕ್ಬಾಲ್ ಅವರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದೆಹಲಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಚುನಾವಣೆ ಇನ್ನೂ ನಡೆಯದ ಕಾರಣ ತಾವು ನಾಮಪತ್ರ ಹಿಂಪಡೆಯುತ್ತಿರುವುದಾಗಿ ಬಿಜೆಪಿಯ ಶಿಖಾ ರೈ ಮತ್ತು ಸೋನಿ ಪಾಲ್ ಹೇಳಿದ್ದಾರೆ.
ದೆಹಲಿ ಮಹಾನಗರ ಪಾಲಿಕೆಗೆ ಎರಡನೇ ಅವಧಿಗೂ ಮೇಯರ್ ಆಗಿ ನೇಮಕಗೊಂಡ ಶೆಲ್ಲಿ ಒಬೆರಾಯ್ ಮತ್ತು ಡೆಪ್ಯೂಟಿ ಮೇಯರ್ ಆದ ಆಲೆ ಮೊಹಮ್ಮದ್ ಇಕ್ಬಾಲ್ ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಅವಿರೋಧವಾಗಿ ಆಯ್ಕೆಯಾದ ಇಬ್ಬರಿಗೂ ಶುಭ ಹಾರೈಕೆಗಳು. ನಮ್ಮ ಮೇಲೆ ಜನರಿಗೆ ಬಹುದೊಡ್ಡ ಮಟ್ಟದ ನಿರೀಕ್ಷೆಯಿದೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳಲು ನಾವೆಲ್ಲ ಸೇರಿ ಕಠಿಣ ಪರಿಶ್ರಮ ವಹಿಸಬೇಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಡಿಸೆಂಬರ್ನಲ್ಲಿ ದೆಹಲಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು, ಬಿಜೆಪಿಯ 15ವರ್ಷಗಳ ಆಡಳಿತ ಕೊನೆಗೊಂಡಿತ್ತು. ಆಮ್ ಆದ್ಮಿ ಪಕ್ಷ 134 ವಾರ್ಡ್ಗಳನ್ನು ಗೆದ್ದು, ಪಾಲಿಕೆಯ ಚುಕ್ಕಾಣಿ ಹಿಡಿದರೆ, ಬಿಜೆಪಿ 104 ವಾರ್ಡ್ಗಳನ್ನಷ್ಟೇ ಗೆದ್ದು , ಗದ್ದುಗೆ ಏರಲಾರದೆ ಸೋತಿತ್ತು. ಚುನಾವಣೆ ನಡೆದ ಬಳಿಕ ಮೇಯರ್ ಆಯ್ಕೆ ಭಾರಿ ಕಗ್ಗಂಟಾಗಿ ಪರಿಣಮಿಸಿತ್ತು. ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾರನ್ನು ತಾತ್ಕಾಲಿಕ ಸ್ಪೀಕರ್ ಆಗಿ ನೇಮಕ ಮಾಡಿ, ಅವರು ನಾಮನಿರ್ದೇಶಿತ ಸದಸ್ಯರಿಗೆ ಮೊದಲು ಪ್ರಮಾಣವಚನ ಬೋಧಿಸಲು ಪ್ರಾರಂಭಿಸಿದಾಗ ಗಲಾಟೆ ಶುರುವಾಗಿ, ಮಾರಾಮಾರಿಯೇ ನಡೆದುಹೋಗಿತ್ತು. ಹೀಗಾಗಿ ಮೇಯರ್-ಉಪಮೇಯರ್ ಆಯ್ಕೆಯೂ ಎರಡು ತಿಂಗಳು ತಡವಾಯಿತು. ಅಂತೂ ಫೆಬ್ರವರಿಯಲ್ಲಿ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಕಳೆದ ಬಾರಿ ಮೇಯರ್ ಸ್ಥಾನಕ್ಕೆ ಆಪ್‌ನ ಶೆಲ್ಲಿ ಒಬೆರಾಯ್ ವಿರುದ್ಧ ಬಿಜೆಪಿ ರೇಖಾ ಗುಪ್ತಾರನ್ನು ಕಣಕ್ಕೆ ಇಳಿಸಿತ್ತು. ಆಗ ಚುನಾವಣೆ ನಡೆದು, ಅದರಲ್ಲಿ ಶೆಲ್ಲಿ ಒಬೆರಾಯ್ 150 ಮತಗಳನ್ನು ಪಡೆದಿದ್ದರು ಮತ್ತು ರೇಖಾ ಗುಪ್ತಾ ಕೇವಲ 116 ವೋಟ್ ಪಡೆದಿದ್ದರು. 34 ಮತಗಳಿಂದ ಬಿಜೆಪಿ ಅಭ್ಯರ್ಥಿಯನ್ನು ಮಣಿಸಿ, ಮೇಯರ್ ಆಗಿದ್ದರು.
ಇದನ್ನೂ ಓದಿ: Delhi Mayoral Poll: ಆಪ್‌ನ ಶೆಲ್ಲಿ ಒಬೆರಾಯ್ ದಿಲ್ಲಿಯ ನೂತನ ಮೇಯರ್, ಗೂಂಡಾಗಳಿಗೆ ಸೋಲಾಯಿತು ಎಂದ ದಿಲ್ಲಿ ಸಿಎಂ ಕೇಜ್ರಿವಾಲ್
ಈಗ ಮತ್ಯಾಕೆ ಮೇಯರ್ ಆದರು?
ದೆಹಲಿಯಲ್ಲಿ ಮೇಯರ್ ಅವಧಿ 1ರಿಂದ 5ವರ್ಷ. ಅಂದರೆ ಒಮ್ಮೆ ಮೇಯರ್ ಆಗಿ ನೇಮಕವಾದರೆ ಅವರು ಸತತ ಐದೂ ವರ್ಷ ಆಡಳಿತ ನಡೆಸುವಂತಿಲ್ಲ. ಪ್ರತಿವರ್ಷವೂ ಹೊಸ ಮೇಯರ್ ಆಯ್ಕೆ ನಡೆಯಲೇಬೇಕಾಗುತ್ತದೆ. ಮರು ಆಯ್ಕೆಯಾಗುವುದು ಅವರವರ ಸಾಮರ್ಥ್ಯದ ಮೇಲೆ ನಿರ್ಧಾರವಾಗಿರುತ್ತದೆ. ಪ್ರತಿ ಆರ್ಥಿಕ ವರ್ಷ ಮುಗಿಯುತ್ತಿದ್ದಂತೆ ದೆಹಲಿ ಮೇಯರ್ ಆಡಳಿತ ಅವಧಿಯೂ ಮುಕ್ತಾಯಗೊಳ್ಳುತ್ತದೆ. ಶೆಲ್ಲಿ ಒಬೆರಾಯ್ ಅವರು ಫೆಬ್ರವರಿಯಲ್ಲಿ ಮೇಯರ್ ಆಗಿ ಆಯ್ಕೆಯಾಗಿದ್ದರು. ಆದರೆ ಮಾರ್ಚ್ ಅಂತ್ಯಕ್ಕೆ 2022ರ ಆರ್ಥಿಕ ವರ್ಷ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ದೆಹಲಿ ಮೇಯರ್ ಆಯ್ಕೆಯೂ ಇನ್ನೊಮ್ಮೆ ನಡೆಯಲೇಬೇಕಿತ್ತು. ಅಂತೆಯೇ ಶೆಲ್ಲಿ ಒಬೆರಾಯ್ ಮರು ಆಯ್ಕೆಯಾಗಿದೆ. ಡೆಪ್ಯೂಟಿ ಮೇಯರ್ ಹುದ್ದೆಗೂ ಇದೇ ನಿಯಮ ಅನ್ವಯ ಆಗುತ್ತದೆ.