ಉನಾ: ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಅಲ್ಲಿಗೆ ಭೇಟಿಕೊಟ್ಟಿದ್ದಾರೆ. ಹಿಮಾಚಲ ಪ್ರದೇಶದ ಉನಾದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಈ ಮೂಲಕ ದೇಶದಲ್ಲಿ ನಾಲ್ಕನೇ ವಂದೇ ಭಾರತ್ ರೈಲು ಸಂಚಾರ ಪ್ರಾರಂಭವಾಗಿದೆ. ಹಾಗೇ, ದೇಶೀಯ ಔಷಧ ಉದ್ಯಮವನ್ನು ಉತ್ತೇಜಿಸುವ ಸಲುವಾಗಿ ಇಲ್ಲೊಂದು ಬಲ್ಕ್ ಡ್ರಗ್ ಪಾರ್ಕ್ (ಸಗಟು ಔಷಧ ದಾಸ್ತಾನು)ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದು, ಅದಕ್ಕಿಂದು ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದರು.
ಇಂದು ಹಿಮಾಚಲ ಪ್ರದೇಶದ ಉನಾಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಅಲ್ಲಿನ ಜನರು ಅದ್ದೂರಿಯಾಗಿ ಸ್ವಾಗತಿಸಿದರು. ನರೇಂದ್ರ ಮೋದಿ ಜನರೆಡೆಗೆ ಕೈ ಬೀಸುತ್ತ ಹೆಜ್ಜೆಹಾಕುತ್ತಿದ್ದರೆ, ಅಲ್ಲಿ ನೆರೆದಿದ್ದವರ ಹರ್ಷೋದ್ಘಾರ ಮುಗಿಲುಮುಟ್ಟಿತ್ತು. ತುಂಬ ಅಭಿಮಾನದಿಂದ ನರೇಂದ್ರ ಮೋದಿ ಜಿಂದಾಬಾದ್, ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದರು. ಅದರಲ್ಲಿ ಗಮನಸೆಳೆದಿದ್ದು, ‘ದೇಖೋ ದೇಖೋ ಕೌನ್ ಆಯಾ-ಶೇರ್ ಆಯಾ, ಶೇರ್ ಆಯಾ’ ಎಂಬ ಘೋಷಣೆ.
ಉನಾದ ರೈಲ್ವೆ ನಿಲ್ದಾಣಕ್ಕೆ, ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಲು ಪ್ರಧಾನಿ ಮೋದಿ ಬರುವಷ್ಟರಲ್ಲಿ ಅಲ್ಲೆಲ್ಲ ಜನರು ತುಂಬಿಬಿಟ್ಟಿದ್ದರು. ಮೋದಿಯವರು ಬರುತ್ತಿದ್ದಂತೆ ಮೊದಲು ಮೋದಿ-ಮೋದಿ ಎಂದು ಕೂಗಲು ಪ್ರಾರಂಭಿಸಿದರು. ಅದಾದ ಮೇಲೆ ಜೈಶ್ರೀರಾಮ್ ಎಂಬ ಘೋಷಣೆ ಕೇಳಿಬಂತು. ಹಾಗೇ ಮತ್ತೊಂದಷ್ಟು ಮಂದಿ ‘ದೇಖೋ ದೇಖೋ ಕೌನ್ ಆಯಾ-ಶೇರ್ ಆಯಾ, ಶೇರ್ ಆಯಾ (ನೋಡಿ ನೋಡಿ ಯಾರು ಬಂದರು-ಸಿಂಹ ಬಂದಿತು..ಸಿಂಹ ಬಂದಿತು)’ ಎಂದು ಅತ್ಯುತ್ಸಾಹದಲ್ಲಿ ಕೂಗಲು ಪ್ರಾರಂಭಿಸಿದರು. ಅಂದರೆ ಪ್ರಧಾನಿಯನ್ನು ಅಲ್ಲಿನ ಜನರು ಸಿಂಹಕ್ಕೆ ಹೋಲಿಸಿ, ಅಬ್ಬರದಿಂದ ಘೋಷಣೆ ಕೂಗುತ್ತಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.
ಇದನ್ನೂ ಓದಿ: Video | ದೇಶದ 3ನೇ ವಂದೇ ಭಾರತ್ ರೈಲು ಸಂಚಾರ ಪ್ರಾರಂಭ; ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ