ಬಹುತೇಕವಾಗಿ ಎಲ್ಲ ಕಂಪನಿಗಳಲ್ಲೂ ಉದ್ಯೋಗಳಿಗೆ ತಮ್ಮ ಕೆಲಸದ ಅವಧಿ ಮುಗಿದ ತಕ್ಷಣ ಎದ್ದು ಹೋಗಲು ಸಾಧ್ಯವಾಗುವುದಿಲ್ಲ. ಏನೋ ಕೆಲಸ ಇರುತ್ತದೆ, ಹಿಡಿದ ಕೆಲಸ ಅರ್ಧ ಆಗಿರುತ್ತದೆ, ಇನ್ನೇನು ಹೊರಡುವ ಸಮಯದಲ್ಲಿ ಬಾಸ್ ಮತ್ತೇನೋ ಹೆಚ್ಚುವರಿ ಜವಾಬ್ದಾರಿ ಕೊಟ್ಟಿರುತ್ತಾರೆ. ಒಟ್ಟಾರೆ…ಲಾಗಿನ್ ಕರೆಕ್ಟ್ ಟೈಮ್ಗೆ ಆಗುವಂತೆ ಸೂಚಿಸುವ ಕಂಪನಿಗಳು ಲಾಗೌಟ್ ಸಮಯಕ್ಕೆ ಮಿತಿ ಇಡುವುದಿಲ್ಲ. ಉದ್ಯೋಗಿಗಳು ಕಡ್ಡಾಯವಾಗಿ 8 ತಾಸೋ/9ತಾಸೋ ಕೆಲಸ ಮಾಡಲೇಬೇಕು ಎಂದು ನಿಯಮ ರೂಪಿಸುತ್ತವೆಯಾದರೂ ನೀವು ನಿಮ್ಮ ವರ್ಕಿಂಗ್ ಅವಧಿ ಮುಗಿದ ತಕ್ಷಣ ಹೊರಡಲು ಸಾಧ್ಯವೇ ಆಗುವುದಿಲ್ಲ. ಕೆಲಸ ಮುಗಿದ ತಕ್ಷಣ ಒಂದು ಕ್ಷಣವೂ ನಿಲ್ಲುವಂತಿಲ್ಲ ಎಂದು ಕಂಪನಿಯೂ ಕಠಿಣ ನಿಯಮ ಇಡುವುದಿಲ್ಲ.
ಆದರೆ ಮಧ್ಯಪ್ರದೇಶದ ಇಂದೋರ್ನಲ್ಲಿರುವ ಒಂದು ಐಟಿ ಕಂಪನಿ ಇದಕ್ಕೆ ತದ್ವಿರುದ್ಧ. ಸಾಫ್ಟ್ಗ್ರಿಡ್ ಕಂಪ್ಯೂಟರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಉದ್ಯೋಗಿಗಳಿಗೆ ಅವರ ಕೆಲಸದ ಅವಧಿ ಮುಗಿಯುತ್ತಿದ್ದಂತೆ ಕಂಪ್ಯೂಟರ್ ಮೇಲೆ ಒಂದು ಸಂದೇಶ ಬರುತ್ತದೆ. ಅದು ಥೇಟ್ ಎಚ್ಚರಿಕೆಯಂತೇ ಇರುತ್ತದೆ. ‘Warning!!!, ನಿಮ್ಮ ಕೆಲಸದ ಅವಧಿ ಮುಗಿದಿದೆ. ಆಫೀಸಿನ ಕಂಪ್ಯೂಟರ್ ಇನ್ನು 10 ನಿಮಿಷದಲ್ಲಿ ಆಫ್ ಆಗುತ್ತದೆ. ನೀವು ಮನೆಗೆ ಹೋಗಬಹುದು’ ಎಂಬುದು ಆ ಮೆಸೇಜ್. ಹೀಗೆ ಆಫೀಸ್ ಕಂಪ್ಯೂಟರ್ ಮೇಲೆ ಮೆಸೇಜ್ ಬರುತ್ತಿದ್ದಂತೆ ಉದ್ಯೋಗಿಗಳು ಮನೆಗೆ ಹೋಗುವ ಸಿದ್ಧತೆಯಲ್ಲಿ ತೊಡಗಿಕೊಳ್ಳಬೇಕು.
ಇದನ್ನೂ ಓದಿ: Viral Video : ಐದು ವರ್ಷದ ಬಾಲಕನೇ ಪೊಲೀಸರಿಗೆ ಮುಖ್ಯಸ್ಥ! ವೈರಲ್ ಆಯ್ತು ಈ ವಿಶೇಷ ವಿಡಿಯೊ
ಸಾಫ್ಟ್ಗ್ರಿಡ್ ಕಂಪ್ಯೂಟರ್ಸ್ ಕಂಪನಿಯ ಎಚ್ಆರ್ ತನ್ವಿ ಖಂಡೇಲ್ವಾಲ್ ಅವರು ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಅವರ ಶಿಫ್ಟ್ ಸಮಯ ಮುಗಿಯುತ್ತಿದ್ದಂತೆ, ಕಂಪ್ಯೂಟರ್ ಪರದೆ ಮೇಲೆ ಮೂಡಿದ ಸಂದೇಶದ ಫೋಟೋ ಶೇರ್ ಮಾಡಿಕೊಂಡು, ‘ಉದ್ಯೋಗಿಗಳ ವೃತ್ತಿ ಜೀವನ ಸಮತೋಲಿತ ಆಗಿರಬೇಕು ಎಂದು ನಮ್ಮ ಕಂಪನಿ ಬಯಸುತ್ತದೆ. ಹೀಗಾಗಿ ನಮ್ಮ ಶಿಫ್ಟಿಂಗ್ ಸಮಯ ಮುಗಿಯುತ್ತಿದ್ದಂತೆ ಒಂದು ಜ್ಞಾಪನೆಯನ್ನು ನೀಡುತ್ತದೆ’ ಎಂದು ಹೇಳಿದ್ದಾರೆ. ‘ಅಷ್ಟೇ ಅಲ್ಲ, ಕೆಲಸದ ಸಮಯಲ್ಲಿ ಹೊರಗಿನಿಂದ ಯಾವುದೇ ಕರೆಗಳು, ಮೇಲ್ಗಳೂ ಬರುವಂತಿಲ್ಲ’ ಇದು ಅತ್ಯುತ್ತಮ ವಿಧಾನವಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಕಂಪನಿಯ ಈ ನಿಯಮವನ್ನು ಹಲವರು ಮೆಚ್ಚಿಕೊಂಡಿದ್ದಾರೆ.