ಮುಂಬೈ: ಬಂಡಾಯ ಶಾಸಕ ಏಕನಾಥ್ ಶಿಂಧೆಯನ್ನು ಶಿವಸೇನೆ ಪಕ್ಷದ ಎಲ್ಲ ಹುದ್ದೆಗಳಿಂದಲೂ ವಜಾಗೊಳಿಸಿ ಉದ್ಧವ್ ಠಾಕ್ರೆ ಆದೇಶ ಹೊರಡಿಸಿದ್ದಾರೆ. ಏಕನಾಥ ಶಿಂಧೆ ಶಿವಸೇನೆಯಿಂದ ಬಂಡಾಯ ಹೋಗಿ ಈಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದಾರೆ. ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆಯಾಗಿದ್ದು ಅವರೀಗ ಶಿಂಧೆಯನ್ನು, ಪಕ್ಷದ ನಾಯಕತ್ವ ಸ್ಥಾನದಿಂದ ಹಿಡಿದು, ಎಲ್ಲ ಹುದ್ದೆಗಳಿಂದಲೂ ತೆಗೆದುಹಾಕಿದ್ದಾರೆ. ʼನೀವು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದೀರಿ. ಈ ಮೂಲಕ ಶಿವಸೇನೆಯ ಸದಸ್ಯತ್ವನ್ನೂ ನೀವೇ ಸ್ವತಃ ಬಿಟ್ಟಿದ್ದೀರಿ. ಹೀಗಾಗಿ ಶಿವಸೇನೆಯ ಪ್ರಮುಖ್ ಆಗಿರುವ ನಾನು ನನ್ನ ಅಧಿಕಾರ ಬಳಸಿಕೊಂಡು, ನಿಮ್ಮನ್ನು ಪಕ್ಷದ ಎಲ್ಲ ಹುದ್ದೆಗಳಿಂದಲೂ ತೆಗೆದುಹಾಕುತ್ತಿದ್ದೇನೆʼ ಎಂದು ಉದ್ಧವ್ ಠಾಕ್ರೆ ಆದೇಶ ಪತ್ರದಲ್ಲಿ ಬರೆದಿದ್ದಾರೆ.
ಶಿವಸೇನೆಯಿಂದ ಬಂಡಾಯವೆದ್ದರೂ ಇವತ್ತಿನವರೆಗೆ ಶಿಂಧೆ ತಾನು ಶಿವಸೇನೆಯ ಪ್ರಾಥಮಿಕ ಸದಸ್ಯತ್ವ ಬಿಟ್ಟಿದ್ದೇನೆ ಎಂದು ಎಲ್ಲಿಯೂ ಹೇಳಿಕೊಳ್ಳಲಿಲ್ಲ. ಅಷ್ಟೇ ಅಲ್ಲ, ನಮ್ಮ ಬಣ್ಣದಲ್ಲಿಯೇ ಶಿವಸೇನೆಯ ಹೆಚ್ಚಿನ ಶಾಸಕ-ಸಂಸದರು ಇರುವುದರಿಂದ ನಾವೇ ನಿಜವಾದ ಶಿವಸೇನೆ ಎಂದೂ ಹೇಳಿಕೊಳ್ಳುತ್ತಿದ್ದಾರೆ. ಆದರೆ ಉದ್ಧವ್ ಠಾಕ್ರೆ ಬಣ ಅದನ್ನು ಒಪ್ಪಿಲ್ಲ. ಅಷ್ಟಲ್ಲದೆ ಈಗ ಅವರನ್ನು ವಜಾಗೊಳಿಸಿ ಹೊರಡಿಸಲಾದ ಆದೇಶದಲ್ಲಿ ‘ನೀವೇ ನಿಮ್ಮ ಸ್ವಯಂ ಇಚ್ಛೆಯಿಂದ ಶಿವಸೇನೆಯ ಸದಸ್ಯತ್ವ ತ್ಯಜಿಸಿದ್ದೀರಿ’ ಎಂಬ ವಾಕ್ಯವಿದೆ. ಇದಕ್ಕಿನ್ನು ಏಕನಾಥ ಶಿಂಧೆಯೇ ಸ್ಪಷ್ಟನೆ ಕೊಡಬೇಕು.
ಶಿವಸೇನೆಯಿಂದ ಬಂಡಾಯ ಎದ್ದು, ಜೂ.21ರಿಂದಲೂ ಏಕನಾಥ್ ಶಿಂಧೆ ಮಹಾರಾಷ್ಟ್ರವನ್ನು ತ್ಯಜಿಸಿದ್ದರು. ಜೂ.29ರಂದು ರಾತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಏಕನಾಥ್ ಶಿಂಧೆ ಬಣ ಮತ್ತು ಬಿಜೆಪಿ ಒಗ್ಗಟ್ಟಾಗಿ ಸರ್ಕಾರ ರಚಿಸಿವೆ. ಈಗಾಗಲೇ ಏಕನಾಥ್ ಶಿಂಧೆ ಸಿಎಂ ಆಗಿ ಮತ್ತು ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಇಂದಿನಿಂದ ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶ ಶುರುವಾಗಿದ್ದು, ಜುಲೈ ೪ರಂದು ಏಕನಾಥ್ ಶಿಂಧೆ ಬಹುಮತ ಸಾಬೀತುಪಡಿಸಬೇಕಾಗಿದೆ.
ಇದನ್ನೂ ಓದಿ: Maha politics | ಮಹಾರಾಷ್ಟ್ರದ ನೂತನ ಸಿಎಂ, ಡೆಪ್ಯೂಟಿ ಸಿಎಂ ಅಭಿನಂದಿಸಿದ ಪ್ರಧಾನಿ ಮೋದಿ