ನವ ದೆಹಲಿ: ಪಾತ್ರಾ ಚಾಲ್ ಭೂಹಗರಣದಲ್ಲಿ ಬಂಧಿತರಾಗಿರುವ ಶಿವಸೇನೆ ಸಂಸದ ಸಂಜಯ್ ರಾವತ್ ಇ ಡಿ ಕಸ್ಟಡಿ ಅವಧಿ ಆಗಸ್ಟ್ 8ರವರೆಗೆ ವಿಸ್ತರಣೆಯಾಗಿದೆ. ಆಗಸ್ಟ್ 1ರಂದು ಸಂಜಯ್ ರಾವತ್ರನ್ನು ಬಂಧಿಸಿದ್ದ ಇಡಿ ಅವರನ್ನು ಮುಂಬೈನ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA)ನ್ಯಾಯಾಲಯದ ಎದುರು ಹಾಜರುಪಡಿಸಿತ್ತು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಆಗಸ್ಟ್ 4ರವರೆಗೆ ರಾವತ್ರನ್ನು ಇಡಿ ಕಸ್ಟಡಿಗೆ ಕೊಟ್ಟಿತ್ತು. ಇಂದಿಗೆ ಅವಧಿ ಮುಗಿದಿದ್ದರಿಂದ ರಾವತ್ರನ್ನು ಮತ್ತೆ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಇನ್ನೂ 8 ದಿನಗಳ ಕಾಲ ರಾವತ್ ನಮ್ಮ ಕಸ್ಟಡಿಗೆ ಬೇಕು ಎಂದು ಇಡಿ ಅಧಿಕಾರಿಗಳು ಇಂದೂ ಕೂಡ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಂದಹಾಗೆ, ಇಂದು ಸಂಜಯ್ ರಾವತ್ ಪತ್ನಿಗೂ ಕೂಡ ಇಡಿ ಸಮನ್ಸ್ ನೀಡಿದೆ.
ಇಡಿ ವಿರುದ್ಧ ದೂರು
ಇಂದು ಸಂಜಯ್ ರಾವತ್ ಅವರು ನ್ಯಾಯಾಲಯದಲ್ಲಿ ಇ ಡಿ ಅಧಿಕಾರಿಗಳ ವಿರುದ್ಧ ದೂರು ಕೊಟ್ಟಿದ್ದಾರೆ. ‘ನನ್ನನ್ನು ಇಡಿ ಅಧಿಕಾರಿಗಳು ಕಿಟಕಿ ಇಲ್ಲದ ಕೋಣೆಯಲ್ಲಿ ಇರಿಸಿದ್ದಾರೆ. ಗಾಳಿ-ಬೆಳಕು ಏನೂ ಇಲ್ಲ ಅಲ್ಲಿ’ ಎಂದು ಹೇಳಿದ್ದಾರೆ. ಸಂಜಯ್ ರಾವತ್ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಧೀಶರು ಪಬ್ಲಿಕ್ ಪ್ರಾಸಿಕ್ಯೂಟರ್ ಬಳಿ ಕೇಳಿದಾಗ, ಅವರು ಪ್ರತ್ಯುತ್ತರಿಸಿ, ‘ಇಡಿ ಸಂಜಯ್ ರಾವತ್ರನ್ನು ಇರಿಸಿದ ಕೊಠಡಿಯಲ್ಲಿ ಎಸಿ ಇದೆ’ ಎಂದಿದ್ದಾರೆ. ಆಗ ಮತ್ತೆ ಸಂಜಯ್ ರಾವತ್ ‘ನನಗೆ ಎಸಿ ಬಳಸಲು ಸಾಧ್ಯವಿಲ್ಲ. ನನ್ನ ಆರೋಗ್ಯ ಹದಗೆಡುತ್ತದೆ’ ಎಂದು ಹೇಳಿದ್ದಾರೆ. ಬಳಿಕ ಸಂಜಯ್ ರಾವತ್ರನ್ನು ಕಿಟಕಿ ಇರುವ, ಗಾಳಿ ಚೆನ್ನಾಗಿ ಬರುವ ಕೋಣೆಯಲ್ಲೇ ಇರಿಸುವ ಭರವಸೆಯನ್ನು ಇಡಿ ಅಧಿಕಾರಿಗಳು ಕೊಟ್ಟಿದ್ದಾರೆ.
ಇದನ್ನೂ ಓದಿ: Patra Chawl land Scam | ಸಂಜಯ್ ರಾವತ್ ಪತ್ನಿ ವರ್ಷಾಗೆ ಇಡಿಯಿಂದ ಸಮನ್ಸ್