ಮುಂಬೈ: ಮಹಾರಾಷ್ಟ್ರ ಶಿವಸೇನೆಯ ಏಕನಾಥ ಶಿಂಧೆ ಮತ್ತು ಉದ್ಧವ್ ಠಾಕ್ರೆ ಬಣದ ನಡುವಿನ ಕಾನೂನು ಹೋರಾಟಕ್ಕೆ ಸಂಬಂಧಪಟ್ಟ ಅರ್ಜಿ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಅಗತ್ಯವಿದೆ ಎಂದು ಇಂದು ಸುಪ್ರೀಂಕೋರ್ಟ್‌ನ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠ ಹೇಳಿದೆ. ಶಿವಸೇನೆಯ ಕಲಹ ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಒಟ್ಟು ಆರು ಅರ್ಜಿಗಳು ಸಲ್ಲಿಕೆಯಾಗಿವೆ. ಅದರಲ್ಲಿ ಒಂದು ಅರ್ಜಿ ಮಾತ್ರ ಏಕನಾಥ ಶಿಂಧೆ ಬಣದ್ದಾಗಿದ್ದು, ಇನ್ನುಳಿದ ಐದು ಅರ್ಜಿಗಳು ಉದ್ಧವ್ ಠಾಕ್ರೆಯವರದ್ದು. ಇಂದು ಬೆಳಗ್ಗೆ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್, ಎರಡು ಬಣಗಳ ನಡುವಿನ ಕಾನೂನು ಸಮರವನ್ನು ಬಗೆಹರಿಸಲು ತ್ರಿಸದಸ್ಯ ಪೀಠಕ್ಕಿಂತಲೂ ಇನ್ನೂ ಹೆಚ್ಚಿನ ನ್ಯಾಯಮೂರ್ತಿಗಳನ್ನು ಒಳಗೊಂಡ ವಿಸ್ತೃತ ಪೀಠ ಅಗತ್ಯವಿದೆ ಎಂದು ಹೇಳಿದೆ. ಹಾಗೇ ವಿಚಾರಣೆಯನ್ನು ಆಗಸ್ಟ್ 1ಕ್ಕೆ ಮುಂದೂಡಿದೆ.
ಉದ್ಧವ್ ಠಾಕ್ರೆ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, ʼಶಿವಸೇನೆಯ 40 ಶಾಸಕರು ಶಿವಸೇನೆಯ ಸದಸ್ಯತ್ವವನ್ನೇ ಬಿಟ್ಟಿದ್ದಾರೆ. ಸಭಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಆಯ್ಕೆ ಮಾಡಿದ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಈ ಮೂಲಕ ಅವರು ಸಹಜವಾಗಿಯೇ ಅನರ್ಹತೆಗೆ ಒಳಗಾಗಿದ್ದಾರೆʼ ಎಂದು ಹೇಳಿದರು. ಹಾಗೇ, ಏಕನಾಥ ಶಿಂಧೆ ಪರ ವಕೀಲ ಹರೀಶ್ ಸಾಳ್ವೆ ಪ್ರತಿವಾದ ಮಂಡಿಸಿ, ʼಒಂದು ಪಕ್ಷದಲ್ಲಿ ಇರುವ ಅರ್ಧಕ್ಕಿಂತಲೂ ಹೆಚ್ಚಿನ ಜನರು ನಾಯಕತ್ವ ಬದಲಾವಣೆ ಬಯಸಿದ್ದಾರೆ. ಇಷ್ಟು ದಿನ ಇದ್ದ ನಾಯಕ ನಮಗೆ ಬೇಡ, ಇನ್ನೊಬ್ಬರು ಮುಂದಾಳತ್ವ ತೆಗೆದುಕೊಳ್ಳಲಿ ಎಂದುಕೊಂಡರೆ ತಪ್ಪೇನು? ಇವರನ್ನೆಲ್ಲ ಅನರ್ಹರರು ಎಂದು ಯಾಕೆ ಪರಿಗಣಿಸಬೇಕು? ಶಿವಸೇನೆಯ ಏಕನಾಥ ಶಿಂಧೆ ಬಣದಲ್ಲಿ ಇರುವವರು ಯಾರೂ ಪಕ್ಷವನ್ನು ಬಿಟ್ಟಿಲ್ಲ. ಇಲ್ಲಿ ಬದಲಾಗಿದ್ದು ನಾಯಕತ್ವ ಮಾತ್ರ. ಹಾಗಾಗಿ ಅನರ್ಹತೆ ಎಂಬ ಪ್ರಶ್ನೆಯೇ ಬರುವುದಿಲ್ಲʼ ಎಂದು ಹೇಳಿದ್ದಾರೆ. ಬಂಡಾಯವೆದ್ದವರನ್ನು ಅನರ್ಹಗೊಳಿಸಬೇಕು ಎಂದು ಉದ್ಧವ್ ಠಾಕ್ರೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ವಾದ-ಪ್ರತಿವಾದ ಮಂಡನೆಯಾಯಿತು.
ಎರಡೂ ಬಣಗಳ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ಸಿಜೆಐ ಎನ್.ವಿ.ರಮಣ ಮಧ್ಯೆ ಮಧ್ಯೆ ಹಲವು ಪ್ರಶ್ನೆಗಳನ್ನು ಹಾಕಿದರು. ʼಪಕ್ಷದ ಶಾಸಕಾಂಗ ನಾಯಕನನ್ನು ತೆಗೆದುಹಾಕುವುದು ಶಾಸಕರ ಕೈಯಲ್ಲಿರುವ ಅಧಿಕಾರ. ಈ ವಿಚಾರದಲ್ಲಿ ಯಾವುದೇ ಗೊಂದಲ-ಸಮಸ್ಯೆ ಬಂದರೂ ಸ್ಪೀಕರ್ ಅದನ್ನು ಬಗೆಹರಿಸಬೇಕಾಗುತ್ತದೆʼ ಎಂದು ಹೇಳಿದರು. ಎರಡೂ ಬಣಗಳ ವಕೀಲರು ಅರ್ಜಿ ವಿಚಾರಣೆ ಮುಂದೂಡಬೇಕು ಎಂಬ ಮನವಿ ಇಟ್ಟ ಹಿನ್ನೆಲೆಯಲ್ಲಿ, ಆಗಸ್ಟ್ 1ಕ್ಕೆ ಮುಂದೂಡಲಾಯಿತು.
ಇದನ್ನೂ ಓದಿ: ಸುಪ್ರೀಂಕೋರ್ಟ್‌ನಲ್ಲಿ ಇಂದು ಏಕನಾಥ್ ಶಿಂಧೆ ಸರ್ಕಾರದ ಭವಿಷ್ಯ ನಿರ್ಧಾರ ನಿರೀಕ್ಷೆ